ವಿಶ್ವದಲ್ಲಿಯೇ ಕನ್ನಡ ಭಾಷೆಯು ಅತಿ ಹೆಚ್ಚಿನ ಶ್ರೀಮಂತಿಕೆÉಯನ್ನು ಪಡೆದ ಭಾಷೆಯಾಗಿದೆ. ಭಾರತದಲ್ಲಿ ಇದು ಎರಡನೆಯ ಅತಿ ಹಳೆಯ ಭಾಷೆ ಎನಿಸುತ್ತದೆ. ಆಂಗ್ಲ ಭಾಷೆಯು ಇನ್ನೂ ಅಂಬೆಗಾಲನ್ನು ಇರಿಸುವ ಸಮಯದಲ್ಲಿಯೇ ಕನ್ನಡಿಗರು “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್” ಆಗಿದ್ದರಂತೆ. ಕನ್ನಡ ಭಾಷೆಯಲ್ಲಿ ಛಂದೋಬದ್ಧವಾದ ರಚನೆಗಳಾದ ಷಟ್ಪದಿಗಳು, ಚೌಪದಿಗಳು, ಮುಕ್ತಕಗಳು, ಕಂದ ಪದ್ಯಗಳು, ರಗಳೆಗಳು ಹಾಗೂ ವಿವಿಧ ವೃತ್ತಕಾವ್ಯಗಳೂ ರಚನೆಯಾಗಿದ್ದು ಭಾಷೆಯನ್ನು ಶ್ರೀಮಂತಗೊಳಿಸಲು ಸಹಾಯವನ್ನು ಮಾಡಿವೆ. ಷಟ್ಪದಿಗಳಲ್ಲೂ ಭಾಮಿನಿಷಟ್ಪದಿ, ಶರಷಟ್ಪದಿ, ಕುಸುಮಷಟ್ಪದಿ, ಭೋಗಷಟ್ಪದಿ, ವಾರ್ಧಕಷಟ್ಪದಿ ಹಾಗೂ ಪರಿವರ್ಧಿನಿಷಟ್ಪದಿ ಎಂಬ ಆರು ಪ್ರಮುಖ ಷಟ್ಪದಿಗಳಿದ್ದು ಇದರೊಂದಿಗೆ ಇನ್ನೂ ಹಲವಾರು ಅಷ್ಟೊಂದು ಬಳಕೆಯಲ್ಲಿಲ್ಲದ ನೂರಾರು ಷಟ್ಪದಿಗಳೂ ಇವೆ. ಅದರಲ್ಲಿ ಭಾಮಿನೀಷಟ್ಪದಿ ಎಂಬುದು ಷಟ್ಪದಿಗಳ ರಾಣಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಭಾಮಿನಿ ಷಟ್ಪದಿಯ ಬಳಕುವಿಕೆ ಹಾಗೂ ಅದರ ಗೇಯವು ಯಕ್ಷಗಾನಕ್ಕೆ ಹೇಳಿಮಾಡಿಸಿದಂತಿದೆ.ಆದುದರಿಂದ ಅದರ ರಚನೆಯು ಸ್ವಲ್ಪ ಕಠಿಣವೆನಿಸಿದರೂ ಛಂದೋಬದ್ಧ ಸಾಹಿತ್ಯಾಸಕ್ತರು ಭಾಮಿನಿಷಟ್ಪದಿಯ ರಚನೆಗೆ ಮುಗಿಬೀಳುತ್ತಾರೆ. ಕುಮಾರ ವ್ಯಾಸನು “ಕರ್ನಾಟಕ ಭಾರತ ಕಥಾಮಂಜರಿ” ಎಂಬ ಅಮೋಘಕಾವ್ಯವನ್ನು ಭಾಮಿನಿಷಟ್ಪದಿಯಲ್ಲಿ ರಚಿಸಿ ಇಂದಿಗೂ ಕಾವ್ಯರಸಿಕರ ಮನ್ನಣೆಗೆ ಅವನು ಪಾತ್ರನಾಗಿದ್ದಾನೆ. ಆದರೆ, ಇತ್ತೀಚಿನ ನವ್ಯ, ನವೀನ ಕವನಗಳ ಹೊನಲಿನಲ್ಲಿ ಇಂತಹ ಶ್ರೇಷ್ಠ ರಚನೆಗಳ ಮೇಲಿನ ಆಸಕ್ತಿಯು ಯುವಪೀಳಿಗೆಯಲ್ಲಿ ಕುಸಿಯುತ್ತಿರುವುದು ದುರದೃಷ್ಟಕರ ವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಈ ಪಾರಂಪರಿಕ ಅಣಿಮುತ್ತಿನ ರಚನಾಕೌಶಲನ ಬಗ್ಗೆ ಇಂದಿನ ಕವಿಕವಯಿತ್ರಿ ಯರಿಗೆ ತುಸು ಮಾರ್ಗದರ್ಶನವನ್ನು ನೀಡುವುದು ಅಗತ್ಯವಾಗಿದೆ.

ಭಾಮಿನಿಷಟ್ಪದಿಯು ಆರು ಚರಣಗಳಿರುವ ಒಂದು ಛಂದೋಬದ್ಧ ಕಾವ್ಯವಾಗಿದ್ದು ತನ್ನದೇ ಆದ ಹಲವಾರು ನಿಯಮಗಳನ್ನು ಹೊಂದಿದೆ. ಇದರಲ್ಲಿ ಒಟ್ಟು 102 ಮಾತ್ರೆಗಳು ಅಡಕಗೊಂಡಿದ್ದು ಒಟ್ಟು 28 ಗಣಗಳೂ ಇವೆ. ಇದರ ಮೊದಲ, ಎರಡನೆಯ, ನಾಲ್ಕನೆಯ ಹಾಗೂ ಐದನೆಯ ಸಾಲಿನಲ್ಲಿ ಮೂರು ಮಾತ್ರೆಯ ಎರಡು ಗಣಗಳೂ ನಾಲ್ಕು ಮಾತ್ರೆಯ ಎರಡು ಗಣಗಳೂ ಇದ್ದರೆ, ಮೂರನೆಯ ಹಾಗೂ ಕೊನೆಯ ಚರಣದಲ್ಲಿ ಒಂದೊಂದು ಹೆಚ್ಚಿನ ಗಣದೊಂದಿಗೆ ಕೊನೆಯಲ್ಲಿ ಎರಡು ಮಾತ್ರೆಗಳ ಗುರುವೂ ಬರುತ್ತದೆ. ಕೊನೆಗೆ ಲಘು ಬಂದರೂ ಗುರು ಎಂದೇ ತಿಳಿಯಬೇಕು. ಭಾಮಿನಿಷಟ್ಪದಿಯ ಮೊದಲ ಹಾಗೂ ಮೂರನೆಯ ಗಣವು ಮೂರು ಮಾತ್ರೆಗಳನ್ನು ಹೊಂದಿದ್ದು ಇಲ್ಲಿ ಮೊದಲು ಗುರು ಬಂದರೆ ಅನಂತರ ಲಘು ಬರುವುದು ಕಡ್ಡಾಯವಾಗಿದೆ. ಹಾಗೆಯೇ ಎರಡನೆಯ ಹಾಗೂ ನಾಲ್ಕನೆಯ ಗಣಗಳಲ್ಲಿ ಮೊದಲು ಲಘು ಬಂದರೆ ಅನಂತರ, ಒತ್ತಿನಲ್ಲಿ ಗುರುವು ಬರಬಾರದು. ಇದಕ್ಕೆ “ಲಗಾದಿಗಣದೋಷ” ಎಂದು ಕರೆಯುತ್ತಾರೆ. ಇದು ಯತಿಭಂಗವನ್ನು ಮಾಡುತ್ತದೆ. ಉದಾಹರಣೆಗೆ ಗಿರೀಶ, ಅನಂತ, ವಿಶಿಷ್ಟ ಮುಂತಾದ ಪದಗಳು ವಿಷಮಗಣಗಳಲ್ಲಿ ಬರುವಂತಿಲ್ಲ.ಹಾಗೆಯೇ, ಗಣಗಳನ್ನು ಒಡೆಯುವಾಗ ಕೇವಲ ಒಂದು ಮಾತ್ರೆಯನ್ನು ಮುಂದಿನ ಗಣಕ್ಕೆ ತಳ್ಳುವಂತಿಲ್ಲ. ಕನಿಷ್ಟ ಎರಡು ಮಾತ್ರೆಗಳ ಗುಂಪನ್ನು ಮುಂದಿನ ಗಣಕ್ಕೆ ವರ್ಗಾಯಿಸಬಹುದು. ಆದಿಪ್ರಾಸವು ಭಾಮಿನಿಷಟ್ಪದಿಗೆ ಕಡ್ಡಾಯವಾಗಿದ್ದು, ಎಲ್ಲ ಚರಣಗಳ ಎರಡನೆಯ ಅಕ್ಷರವು ಒಂದೇಪರಿಯ ವ್ಯಂಜನಪದವನ್ನು ಹೊಂದಿದ್ದು ಸ್ವರಗಳು ಭಿನ್ನವಾಗಿರಬಹುದು.ಈ ಪ್ರಾಸಪದಗಳು ಅಲ್ಪಪ್ರಾಣ ಅಥವಾ ಮಹಾಪ್ರಾಣದ ಅಕ್ಷರವೂ ಆಗಬಹುದು.ಈ ಪ್ರಾಸಪದಗಳು ಎಲ್ಲವೂ ಭಿನ್ನವಾಗಿದ್ದರೆ ಭಾಮಿನೀಷಟ್ಪದಿಯ ಮೆರುಗು ಹೆಚ್ಚುತ್ತದೆ. ಇದರೊಂದಿಗೆ ಅರಿಸಮಾಸದೋಷವೂ ಭಾಮಿನೀಷಟ್ಪದಿಯಲ್ಲಿ ಬರುವಂತಿಲ್ಲ. ಸಂಸ್ಕøತ ಪದವನ್ನು ಕನ್ನಡ ಪದದೊಂದಿಗೆ ಬೆರೆಸಿ, ವಿಭಕ್ತೀಪ್ರತ್ಯಯವನ್ನು ಬಳಸದಿದ್ದರೆ ಅಲ್ಲಿ ಅರಿಸಮಾಸದೋಷವು ಕಾಣಿಸಿ ಕೊಳ್ಳುತ್ತದೆ. ಉದಾಹರಣೆಗೆ ಆನೆಬಲ, ಕೃಷ್ಣಗುಡಿ, ತಿಪ್ಪೆರಾಶಿ, ಸಪ್ತಕುದುರೆ ಇಂತಹ ಪದಗಳು ತಪ್ಪು ಬಳಕೆ ಗಳಾಗಿದ್ದು ಅವು ಆನೆಯಬಲ, ಕೃಷ್ಣನ ಗುಡಿ, ತಿಪ್ಪೆಯಗುಂಡಿ ಹಾಗೂ ಸಪ್ತವಾಜಿ ಎಂದು ಸರಿಪಡಿಸಿಕೊಳ್ಳಬೇಕಾಗುತ್ತದೆ. ಭಾಮಿನಿಷಟ್ಪದಿಗಳಲ್ಲಿ ಮೊದಲ ಹಾಗೂ ನಾಲ್ಕನೆಯ ಚರಣದ ಮೊದಲ ಗಣವು ಮಾತ್ರ ಸ್ವರಾಕ್ಷರದಿಂದ ಆರಂಭವಾಗಬಹುದೇ ಹೊರತು ಮಧ್ಯದ ಯಾವುದೇ ಗಣಗಳಲ್ಲೂ ಸ್ವರಾಕ್ಷರದ ಆರಂಭವು ಇರಬಾರೆನ್ನುವ ಅಘೋಷಿತ ನಿಯಮವೂ ಇದೆ. ಇದರೊಂದಿಗೆ ಒಮ್ಮೆ ಬಳಸಿದ ಪದವನ್ನು ಅದೇ ಷಟ್ಪದಿಯಲ್ಲಿ ಮತ್ತೆ ಮತ್ತೆ ಬಳಸಿದರೂ ಷಟ್ಪದಿಯ ಮೆರುಗು ಮುಸುಕಾಗುತ್ತದೆ. ಕನ್ನಡದ ಪದಗಳ ಮೇಲೆ ಪ್ರಭುತ್ವವು ಇರಲೇಬೇಕು ಎನ್ನುವ ಬಿಗಿ ನಿಲುವು ಭಾಮಿನೀಷಟ್ಪದಿಯ ರಚನೆಗೆ ಇಲ್ಲ. ಆದರೂ ಕನ್ನಡದ ಪದಗಳು ಹೆಚ್ಚಿನ ಸಂಖ್ಯೆಯಲ್ಲಿ ತಿಳಿದಿದ್ದರೆ, ಸಮಾನಾರ್ಥಕ ಮತ್ತು ಪರ್ಯಾಯ ಪದಗಳು ಗೊತ್ತಿದ್ದರೆ ಬಳಕೆಯಲ್ಲಿರುವ ಕನ್ನಡದಲ್ಲೂ ಉತ್ತಮವಾದ ಭಾಮಿನಿಷಟ್ಪದಿಯನ್ನು ರಚಿಸಬಹುದು. ಪ್ರತಿದಿನವೂ ಒಂದರ್ಧಗಂಟೆ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಭಾಷಾ ಸಂಪತ್ತು ಹೆಚ್ಚುತ್ತದೆ, ಉತ್ತಮ ಗುಣಮಟ್ಟದ ಕಾವ್ಯರಚನೆಯೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಇಂದಿನ ಪೀಳಿಗೆಯು ಯತ್ನಿಸಲಿ ಎಂಬ ಹಾರೈಕೆಗಳು.

?ಕಿಗ್ಗಾಲು ಎಸ್ ಗಿರೀಶ್,

ಮೂರ್ನಾಡು