ಮಡಿಕೇರಿ, ಜ. 10: ಮಡಿಕೇರಿಯ ಶ್ರೀ ವಿನಾಯಕ ಕೊಡವ ಕೇರಿ ಸಂಘದ ಒತ್ತೋರ್ಮೆ ಕೂಟ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಸಂಘದ ಅಧ್ಯಕ್ಷ ಚೊಟ್ಟೆಯಂಡ ಕೆ. ಅಪ್ಪಾಜಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಸದಸ್ಯರುಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಈ ಸಂದರ್ಭ ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಅಪ್ಪಾಜಿ ಅವರು, ಜನಾಂಗದವರಲ್ಲಿ ಸಂಪ್ರದಾಯ, ಪದ್ಧತಿ, ಪರಂಪರೆಗಳೊಂದಿಗೆ ಸಾಮರಸ್ಯ ಮೂಡಿಸುವುದು, ಕಷ್ಟ-ಸುಖಗಳಿಗೆ ನೆರವಾಗುವ ಉದ್ದೇಶದೊಂದಿಗೆ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭ ಕೇರಿಯ ಹಿರಿಯರಾದ ಬೊಟ್ಟೋಳಂಡ ಡಿ. ಪೂಣಚ್ಚ ಹಾಗೂ ಓಡಿಯಂಡ ಸಿ. ಮಾದಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಸದಸ್ಯೆ ನೆರವಂಡ ಅನಿತಾ ಪೂವಯ್ಯ ಪ್ರಾರ್ಥಿಸಿ, ನಿರ್ದೇಶಕ ಕುಡುವಂಡ ಬಿ. ಉತ್ತಪ್ಪ ವಂದಿಸಿದರು. ಕಾರ್ಯದರ್ಶಿ ಬಲ್ಯಂಡ ವಿಜು ನಂಜಪ್ಪ ಕಾರ್ಯಕ್ರಮ ನಿರೂಪಿಸಿದರು. ಅಂತರ ಕೊಡವಕೇರಿ ಮೇಳದಲ್ಲಿ ವಿಜೇತರಾದ ವಿವಿಧ ಕಲಾ ತಂಡದ ಸದಸ್ಯರನ್ನು ಈ ಸಂದರ್ಭ ಅಭಿನಂದಿಸಲಾಯಿತು.