ವೀರಾಜಪೇಟೆ, ಜ. 10: ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತ್ರಿ-ಪಾರಾಣೆ ಅಂತರ ತಾಲೂಕು ಹೆಮ್ಮಾಡು ಬಳಿ ಕಾವೇರಿ ನದಿ ಹಿನ್ನೀರಿನ ಸೇತುವೆ ನಿರ್ಮಾಣದ ಭೂಮಿಪೂಜೆ ನಡೆಸಿ ಮಾತನಾಡಿದ ಅವರು, ಪ್ರತಿ ಮಳೆಗಾಲದಲ್ಲಿ ಹೆಮ್ಮಾಡು ಗ್ರಾಮ ದ್ವೀಪದಂತಾಗುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡಲು ಸಾಧ್ಯವಿಲ್ಲ. ಸೇತುವೆಯ ಪಕ್ಕದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ಮಳೆಗಾಲದಲ್ಲಿ ಮಕ್ಕಳು ಭಯದ ವಾತಾವರಣದಲ್ಲಿ ವ್ಯಾಸಂಗ ಮಾಡುವ ಪರಿಸ್ಥಿತಿ ಎದುರಾಗುತ್ತಿದೆ. ಇದನ್ನು ಮನಗಂಡು ಸರ್ಕಾರದ ‘ಶಾಲಾಮಾಲ’ ಯೋಜನೆಯಡಿಯಲ್ಲಿ ರೂ. 1.10 ಕೋಟಿ ವೆಚ್ಚದಲ್ಲಿ ನಬಾರ್ಡ್ ಮೂಲಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರು ಹಾಗೂ ಜಾಗದ ಮಾಲೀಕರು ಸಹಕರಿಸಬೇಕು ಎಂದು ಹೇಳಿದರು.
ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಸರ್ಕಾರ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಕುಡಿಯುವ ನೀರಿನ ಕೊರತೆ ಇರುವ ಕಡೆಗಳಲ್ಲಿ ಬೋರ್‍ವೆಲ್ ಹಾಗೂ ತೆರೆದಬಾವಿಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಭೂಮಿಪೂಜೆ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಆಲತಂಡ ಸೀತಮ್ಮ, ಜಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೋಕಿಂ, ಹೆಮ್ಮಾಡು ಭದ್ರಕಾಳಿ ದೇವಾಲಯದ ಅಧ್ಯಕ್ಷ ಮಧುಕುಮಾರ್, ಪಿಡಬ್ಲ್ಯುಡಿ ಸಹಾಯಕ ಅಭಿಯಂತರ ಸುರೇಶ್, ಗ್ರಾಮಸ್ಥರಾದ ಸಿ. ಭೀಮಯ್ಯ, ಬಿದ್ದಂಡ ಬೋಪಣ್ಣ, ಆನಂದ, ಮೂಳೇರ ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.