ಸುಂಟಿಕೊಪ್ಪ, ಜ.9: ಗ್ರಾಮ ಪಂಚಾಯಿತಿ ಯೋಜನೆಗಳ ಮಾಹಿತಿ ಜನರಿಗೆ ಗೊತ್ತಾಗುವುದೇ ಇಲ್ಲ ತೆರೆದ ಬಾವಿ ನಿರ್ಮಾಣದ ಅನುದಾನ ಹೆಚ್ಚಿಸಬೇಕು, ಆಶ್ರಯ ಮನೆಯ ಕಂತಿನ ಬಿಡುಗಡೆಯಾಗುತ್ತಿಲ್ಲ ಎಂದು ಸುಂಟಿಕೊಪ್ಪ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಸುಂಟಿಕೊಪ್ಪ ಗ್ರೇಡ್1 ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಎಂಜಿಎಸ್ಆರ್ಜಿಎ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಯು ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸಂಯೋಜಕ ಪ್ರೀತಂ ಪೊನ್ನಪ್ಪ ಮಾತನಾಡಿ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ 2018 ಅಕ್ಟೋಬರ್ನಿಂದ 2019 ಮಾರ್ಚ್ ಅಂತ್ಯದವರೆಗೆ 16 ಲಕ್ಷದ ಕಾಮಗಾರಿ ಉದ್ಯೋಗಖಾತ್ರಿ ಯೋಜನೆಯಡಿ ನಡೆದಿದೆ. 2019ರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ 17 ಲಕ್ಷದ 19 ಸಾವಿರ ರೂಗಳ ಕಾಮಗಾರಿ ಬಗ್ಗೆ ಸ್ಥಳ ಪರಿಶೀಲಿಸಿದ್ದು ವಿವರಣೆ ನೀಡಲಾಗಿದೆ. ಗ್ರಾಮಸ್ಥರಿಗೆ ಸಂಶಯವಿದ್ದರೆ ಮಾಹಿತಿ ಕೇಳಬಹುದು ಎಂದು ಹೇಳಿದರು.
ಪಶುಸಂಗೋಪನಾ ಇಲಾಖೆಯ ಕಚೇರಿ ಒತ್ತಿನಲ್ಲಿ 10 ಲಕ್ಷ ವೆಚ್ಚದಲ್ಲಿ ದನದ ಕೊಟ್ಟಿಗೆ ನಿರ್ಮಾಣವಾಗುತ್ತಿದೆ; ಇದರಿಂದ ಸ್ಥಳೀಯ ಕೃಷಿಕರು ದನ - ಕರುಗಳನ್ನು ಇಲ್ಲಿ ಕಟ್ಟಿಹಾಕಲು ಸಹಕಾರಿಯಾಗಲಿದೆ. ಜಿಲ್ಲೆಯಲ್ಲೇ ಇದು ಪ್ರಥಮ ಸರಕಾರದ ದನದ ಕೊಟ್ಟಿಗೆಯಾಗಿದೆ ಎಂದು ಪಿಡಿಒ ವೇಣುಗೋಪಾಲ್ ತಿಳಿಸಿದರು.
ಗದ್ದೆಹಳ್ಳದ ಮುಸ್ಲಿಂ ಸಮುದಾಯದವರ ಸ್ಮಶಾನಕ್ಕೆ ತೆರಳಲು ರಸ್ತೆ ನಿರ್ಮಿಸಿ 1 ತಿಂಗಳಿನಲ್ಲೇ ರಸ್ತೆ ಕಿತ್ತು ಹೋಗಿದೆ ಎಂದು ಗ್ರಾಮಸ್ಥ ಪಿ.ಆರ್.ಸುನಿಲ್ ಹೇಳಿದರು. ಆಶ್ರಯ ಮನೆಯ ಕಂತಿನ ಹಣ 1 ವರ್ಷದಿಂದ ಬಿಡುಗಡೆಯಾಗಿಲ್ಲ; ಅಡಿಪಾಯ ಗೋಡೆ ನಿರ್ಮಿಸಿಯಾಗಿದೆ ಎಂದು ಫಲಾನುಭವಿ ವಸಂತ್ ಅಳಲು ತೋಡಿಕೊಂಡರು. ತೆರೆದ ಬಾವಿ ತೆಗೆಯಲು 82,000 ರೂ ಮಾತ್ರ ಅನುದಾನ ದೊರೆತಿದ್ದು ಈ ಹಣದಲ್ಲಿ ಬಾವಿ ತೆಗೆಯಲು ಸಾಧ್ಯವಾಗುವುದಿಲ್ಲ; ಹೆಚ್ಚಿನ ಅನುದಾನ ನೀಡಬೇಕು ಎಂದು ಪಿ.ಎಫ್.ಸಬಾಸ್ಟಿನ್ ಆಗ್ರಹಿಸಿದರು.
ಗ್ರಾಮಸಭೆ, ವಾರ್ಡ್ ಸಭೆಗೆ ಸದಸ್ಯರುಗಳು ಸದಾ ಗೈರು ಹಾಜರಾಗುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಿ ಎಂದು ಪಿ.ಆರ್.ಸುನಿಲ್ ಪಿಡಿಒ ಅವರನ್ನು ಒತ್ತಾಯಿಸಿದರು.
ಪಂಚಾಯಿತಿಯಲ್ಲಿ ಜನೋಪಯೋಗಿ ಕೆಲಸದ ಬಗ್ಗೆ ಜನರಿಗೆ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಅಬ್ದುಲ್ನಾಸೀರ್ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಸಭೆಯಲ್ಲಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ್, ಸದಸ್ಯರುಗಳಾದ ಕರೀಂ,ಚಂದ್ರ, ಎ.ಶ್ರೀಧರ್ ಕುಮಾರ್, ನಾಗರತ್ನ, ಶಿವಮ್ಮ, ರತ್ನ ಹಾಗೂ ಅಭಿಯಂತರೆ ನಿಶಾರಾಣಿ ಹಾಜರಿದ್ದರು.