ಗೋಣಿಕೊಪ್ಪಲು, ಜ. 9: ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಒಳಗೊಂಡಂತೆ 19 ಸಿಬ್ಬಂದಿಗಳು ವೇತನವಿಲ್ಲದೇ ಪರದಾಡುವ ಸ್ಥಿತಿ ಉದ್ಬವಿಸಿದೆ.
ತಿಂಗಳ ಸಂಬಳವನ್ನೇ ನಂಬಿರುವ ಸಿಬ್ಬಂದಿಗಳು ಅತಂತ್ರ ಸ್ಥಿತಿಯಲ್ಲಿದ್ದು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮನೆ ಬಾಡಿಗೆ, ಮಕ್ಕಳ ಫೀಸು, ಇತರ ಖರ್ಚುಗಳಿಗೆ ಬೇರೆಯವರ ಮುಂದೆ ಕೈಒಡ್ಡಿ ನಿಲ್ಲುವ ಪರಿಸ್ಥಿತಿ ತಲೆದೂರಿದೆ. ಕಳೆದ 6 ತಿಂಗಳಿನಿಂದ ವೇತನವಿಲ್ಲದೆ ಇಲ್ಲಿನ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದಾರೆ.ಜಿ.ಪಂ. ಅಧೀನದಲ್ಲಿದ್ದ ಆರೋಗ್ಯ ಕೇಂದ್ರವನ್ನು ಕೆಲವು ವರ್ಷಗಳ ಹಿಂದೆ ಮೈಸೂರಿನ ವಿವೇಕಾನಂದ ಪೌಂಡೇಷನ್ (ಮೊದಲ ಪುಟದಿಂದ) ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ತದನಂತರ ಇಲ್ಲಿನ ಸಿಬ್ಬಂದಿಗಳು ತಿಂಗಳ ವೇತನಕ್ಕೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕುಟುಂಬ ನಿರ್ವಹಣೆ ಅಸಾಧ್ಯವಾಗಿದ್ದು, ಸಾಲ ಹೊರೆ ಹೆಗಲೇರಿದೆ ಎಂದು ಆರೋಗ್ಯ ಕೇಂದ್ರದ ಸಿಬ್ಬಂದಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ಓರ್ವ ವೈದ್ಯ ಮತ್ತು 6 ಮಂದಿ ಕಿರಿಯ ಆರೋಗ್ಯ ಸಹಾಯಕರು, ಒಬ್ಬರು ಶುಶ್ರೂಷಕಿ, ಶುಶ್ರೂಷಕ ಮತ್ತು ಪ್ರಯೋಗ ತಜ್ಞರು, ಫಾರ್ಮಸಿಸ್ಟ್, 4 ‘ಡಿ’ ಗ್ರೂಪ್ ನೌಕರರು ಸೇರಿ 19 ಜನ ಸಿಬ್ಬಂದಿಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿತ್ಯ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಇಲ್ಲಿನ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ವೇತನವಿಲ್ಲದೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಇವರ ಸಮಸ್ಯೆಯನ್ನು ಬಗೆಹರಿಸಬೇಕಾದವರು ನಿರಾವ ಮೌನವಕ್ಕೆ ಜಾರಿದ್ದು, ಇವರ ಪರಿಸ್ಥಿತಿಯನ್ನು ಬಗೆಹರಿಸಲು ಗಮನ ಹರಿಸುತ್ತಿಲ್ಲ. ಖಾಸಗಿ ಸಂಸ್ಥೆಯ ವ್ಯವಸ್ಥೆಯಲ್ಲಿ ಆರೋಗ್ಯ ಕೇಂದ್ರ ಸುಸರ್ಜಿತವಾಗಿ ನಡೆಯುತ್ತದೆ ಎಂಬ ಭರವಸೆಯಲ್ಲಿ ಜಿಲ್ಲಾ ಆರೋಗ್ಯ ಕೇಂದ್ರದ ಅಧೀನದಲ್ಲಿದ್ದ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಖಾಸಗಿ ಸಂಸ್ಥೆಯಾದ ವಿವೇಕಾನಂದ ಪೌಂಡೇಷನ್ ನಿರ್ವಹಣೆಗೆ ವಹಿಸಲಾಗಿದೆ. ಆದರೆ ಸಂಸ್ಥೆ ಸಿಬ್ಬಂದಿಗಳಿಗೆ ವೇತನ ನೀಡದೆ ದುಡಿಸಿಕೊಳ್ಳುತ್ತಿದೆ. ಇದರಿಂದ ಇಲ್ಲಿನ ಸಿಬ್ಬಂದಿಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮುಂದಾದರೂ ಈ ವ್ಯವಸ್ಥೆಯಿಂದ ಮುಕ್ತಿಗೊಳಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಪ್ರಜ್ಞಾವಂತರ ಒತ್ತಾಯವಾಗಿದೆ.
ವಿಶೇಷ ವರದಿ: ಎನ್.ಎನ್. ದಿನೇಶ್