ಮಡಿಕೇರಿ, ಜ. 8 : ಅಪ್ರಾಪ್ತ ಬಾಲಕಿಗೆ ಹುಟ್ಟಿದ ನವಜಾತ ಶಿಶುವನ್ನು ಮಾರಾಟ ಮಾಡಿದ ಆರೋಪವನ್ನು ಎದುರಿಸುತ್ತಿರುವ ವೈದ್ಯ ದಂಪತಿಗಳನ್ನು ಸರ್ಕಾರ ಒಂದು ವಾರದ ಒಳಗೆ ಕರ್ತವ್ಯದಿಂದ ಅಮಾನತುಗೊಳಿಸದಿದ್ದಲ್ಲಿ ಜಿಲ್ಲಾ ಆಸ್ಪತ್ರೆಯ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಮಡಿಕೇರಿ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ವೈದ್ಯ ದಂಪತಿಗಳು ನವಜಾತ ಶಿಶುವನ್ನು ಮಾರಾಟ ಮಾಡುವ ಮೂಲಕ ವೈದ್ಯ ಧರ್ಮಕ್ಕೆ ಅಪಚಾರ ಎಸಗಿದ್ದಾರೆ ಎಂದು ಟೀಕಿಸಿದರು.

ಇಬ್ಬರು ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾನೂನಿನಂತೆ ಆರೋಪ ಕೇಳಿ ಬಂದ 48 ಗಂಟೆಗಳಲ್ಲಿ ಅವರನ್ನು ಅಮಾನತುಗೊಳಿಸಬೇಕಾಗಿತ್ತು. ಆದರೆ, ಇಲ್ಲಿಯವರೆಗೆ ವೈದ್ಯ ದಂಪತಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಈ ಇಬ್ಬರು ವೈದ್ಯರು ಆರೋಪಿ ಸ್ಥಾನದಲ್ಲಿದ್ದು, ತಕ್ಷಣ ಇವರನ್ನು ಅಮಾನತುಗೊಳಿಸಿ, ತನಿಖೆಯ ಜವಾಬ್ದಾರಿಯನ್ನು ಸಿಐಡಿ ಅಥವಾ ಸಿಬಿಐಗೆ ಒಪ್ಪಿಸಬೇಕು, ಆರೋಪ ಸಾಬೀತಾದರೆ, ಹುದ್ದೆಯಿಂದ ವಜಾ ಗೊಳಿಸಬೇಕೆಂದು ಪವನ್ ಪೆಮ್ಮಯ್ಯ ಒತ್ತಾಯಿಸಿದರು.

ಹೆರಿಗೆಗೆ ಸಂಬಂಧಿಸಿದ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಆಸ್ಪತ್ರೆಯಿಂದ ಸರ್ಕಾರ ವಶಕ್ಕೆ ಪಡೆದು ತನಿಖೆ ಕೈಗೊಳ್ಳಬೇಕು. ಪ್ರಕರಣವನ್ನು ಮುಚ್ಚಿಹಾಕಲು ಸಹಕರಿಸಿದ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಕಾನೂನು ರೀತಿ ಪ್ರಕರಣ ದಾಖಲಿಸಬೇಕೆಂದು ಪವನ್ ಪೆಮ್ಮಯ್ಯ ಒತ್ತಾಯಿಸಿದರು.

ಈ ಹಿಂದೆ ಜಿಲ್ಲಾ ಆಸ್ಪತ್ರೆಗೆ ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಭೇಟಿ ನೀಡಿದಾಗ ಸರ್ಕಾರಿ ವೈದ್ಯರು, ಖಾಸಗಿ ಆದಾಯ ಗಳಿಕೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ವೇದಿಕೆ ಗಮನ ಸೆಳೆÉದು ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಸಿತ್ತು. ಆದರೂ ಈ ರೀತಿಯ ಪ್ರಕರಣ ಪ್ರಜ್ಞಾವಂತರ ಜಿಲ್ಲೆ ಕೊಡಗಿನಲ್ಲಿ ನಡೆದಿರುವುದು ವಿಷಾದಕರವೆಂದರು.

ಆರೋಪ ಎದುರಿಸುತ್ತಿರುವ ವೈದ್ಯರು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ನ ಜಿಲ್ಲಾ ಘಟಕದ ಪ್ರಮುಖ ಸ್ಥಾನದಲ್ಲಿ ಇರುವುದರಿಂದ, ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಅವರೊಂದಿಗೆ ಪ್ರಕರಣದ ಬಗ್ಗೆ ಚರ್ಚಿಸಿ, ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಖಜಾಂಚಿ ಉಮೇಶ್ ಗೌಡ, ನಿರ್ದೇಶಕ ಮಡಿಕೇರಿ ಸತ್ಯ, ಮಹಿಳಾ ಘಟಕದ ಅಧ್ಯಕ್ಷತೆ ರಶ್ಮಿಶೆಟ್ಟಿ ಹಾಗೂ ಉಪಾಧ್ಯಕ್ಷೆ ಟೀನಾ ಉಪಸ್ಥಿತರಿದ್ದರು.