ಬೆಂಗಳೂರು, ಜ. 8 : ಕಾವೇರಿ ನದಿಯ ಪುನಶ್ಚೇತನಕ್ಕಾಗಿ ಈಶಾ ಫೌಂಡೇಷನ್‍ನ ಸ್ಥಾಪಕ ಜಗ್ಗಿ ವಾಸುದೇವ್ ನಡೆಸುತ್ತಿರುವ ಕಾವೇರಿ ಕೂಗು (ಕಾವೇರಿ ಕಾಲಿಂಗ್) ಅಭಿಯಾನಕ್ಕೆ ಸಂಸ್ಥೆಯು ಹಣ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿ ನಾಗರಿಕ ಎ.ವಿ ಅಮರನಾಥನ್ ಅರ್ಜಿ ಸಲ್ಲಿಸಿದ್ದು, ಸಾರ್ವಜನಿಕ ಹಿತಾಸಕ್ತಿಯ ಈ ದೂರನ್ನು ಪರಿಶೀಲಿಸಿದ ಉಚ್ಛ ನ್ಯಾಯಾಲಯ ಸಂಸ್ಥೆಯು ಸಂಗ್ರಹಿಸಿದ ಹಣದ ಮೊತ್ತವನ್ನು ಬಹಿರಂಗ ಪಡಿಸಲು ಸೂಚಿಸಿ ಅಧ್ಯಾತ್ಮದ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಉತ್ತೇಜನ ನೀಡುವುದಿಲ್ಲ ಎಂದು ಹೇಳಿದೆ.

ಫೌಂಡೇಷನ್ ಕೈಗೊಂಡಿರುವ ಯೋಜನೆಯ ಸಾಧಕ ಮತ್ತು ಬಾಧಕಗಳ ಕುರಿತು ಅಧ್ಯಯನ ಮಾಡದೆಯೇ ಖಾಸಗಿ ಸಂಸ್ಥೆಯೊಂದಕ್ಕೆ ತನ್ನ ಭೂಮಿಯಲ್ಲಿ ಗಿಡ ನೆಡಲು ಸರ್ಕಾರ ಹೇಗೆ ಅವಕಾಶ ನೀಡಿದೆ ಎಂದು ಅಮರನಾಥನ್ ಪ್ರಶ್ನಿಸಿದ್ದಾರೆ. ಅಲ್ಲದೆ, ಫೌಂಡೇಷನ್ ತನ್ನ ಅಭಿಯಾನದಲ್ಲಿ ರೂ. 10,164 ಕೋಟಿ ದೇಣಿಗೆ ಸಂಗ್ರಹಿಸುವ ನಿರೀಕ್ಷೆಯಿದ್ದು, ಜನರಿಂದ ಇಷ್ಟು ಭಾರೀ ಪ್ರಮಾಣದ ಹಣ ಸಂಗ್ರಹಿಸುವುದು ಕಳವಳಕಾರಿಯಾಗಿದೆ ಎಂದು ವಾದಿಸಿದ್ದಾರೆ.

ಅಭಿಯಾನಕ್ಕಾಗಿ ಇದುವರೆಗೂ ಎಷ್ಟು ಹಣವನ್ನು ಸಂಗ್ರಹಿಸಲಾಗಿದೆ ಮತ್ತು ಯಾವ ಯಾವ ಮಾರ್ಗಗಳಲ್ಲಿ ಹಣ ಸಂಗ್ರಹ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸುವಂತೆ ಈಶಾ ಫೌಂಡೇಷನ್‍ಗೆ ನ್ಯಾಯಾಧೀಶ ಎ.ಎಸ್ ಓಕಾ ಸೂಚಿಸಿದರು. ಮುಂದಿನ ವಿಚಾರಣೆಯನ್ನು ಫೆ. 12ಕ್ಕೆ ನಿಗದಿಪಡಿಸಲಾಗಿದೆ.

ಕೊಯಮತ್ತೂರು ಮೂಲದ ಈಶಾ ಫೌಂಡೇಷನ್‍ನ ಜಗ್ಗಿ ವಾಸುದೇವ್, ಒಣಗುತ್ತಿರುವ ನದಿಯ ಪುನಶ್ಚೇತನಕ್ಕಾಗಿ ‘ಕಾವೇರಿ ಕಾಲಿಂಗ್' ಅಭಿಯಾನಕ್ಕೆ ಕಳೆದ ಸೆಪ್ಟೆಂಬರ್ 3ರಂದು ತಲಕಾವೇರಿಯಲ್ಲಿ ಚಾಲನೆ ನೀಡಿದರು. ಕಾವೇರಿ ನದಿ ಹುಟ್ಟುವಲ್ಲಿನಿಂದ ಅದು ಸಾಗುವ ಉದ್ದಕ್ಕೂ ತೀರದಲ್ಲಿ ಗಿಡಗಳನ್ನು ನೆಡುವುದು ಅಭಿಯಾನದ ಉದ್ದೇಶ. ಇದಕ್ಕಾಗಿ ಒಂದು ಗಿಡಕ್ಕೆ ರೂ.42 ರÀಂತೆ ಜನರಿಂದ ಹಣ ಸಂಗ್ರಹ ಮಾಡಲಾಗುತ್ತಿದ್ದು ಒಟ್ಟು 242 ಕೋಟಿ ಗಿಡಗಳನ್ನು ನೆಡುವ ಗುರಿ ಈ ಅಭಿಯಾನದ್ದಾಗಿದೆ.