ಮಡಿಕೇರಿ, ಜ. 8: ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಾಯಶ್ಚಿತ್ತಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಬುಧವಾರದಿಂದ ಕೈಗೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ.ದೇವಾಲಯದ ಧಾರ್ಮಿಕ ಮಾರ್ಗದರ್ಶಿಗಳಾದ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಈ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬುಧವಾರ ದಿನ ಪ್ರಾರ್ಥನೆ, ಅಘೋರ ಹೋಮ ಹಾಗೂ ಆವಾಹನೆಗಳು ನಡೆದವು. ಈ ಸಂದರ್ಭ ಕ್ಷೇತ್ರ ತಂತ್ರಿಗಳೊಂದಿಗೆ ದೈವಜ್ಞರು, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಟಿ.ಹೆಚ್. ಉದಯಕುಮಾರ್, ಪ್ರಕಾಶ್ ಆಚಾರ್ಯ, ಕವಿತಾ ಕಾವೇರಮ್ಮ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಹಾಗೂ ಭಕ್ತಮಂಡಳಿಯವರು ಪಾಲ್ಗೊಂಡಿದ್ದರು.(ಮೊದಲ ಪುಟದಿಂದ) ಗುರುವಾರ ದಿನ ಬೆಳಿಗ್ಗೆ 7 ರಿಂದ 12 ಕಾಯಿ ಗಣಪತಿ ಹೋಮ, ತಿಲಹೋಮ, ಪವಮಾನ ಹೋಮ, ತ್ರಿಕಾಲ ಪೂಜೆ, ಸಪ್ತಪತೀ ಪಾರಾಯಣ, ದ್ವಾದಶ ಮೂರ್ತಿ ಆರಾಧನೆ, ಸುಹಾಸಿನಿ ಆರಾಧನೆ, ದಂಪತಿ ಪೂಜೆ, ಗೋಪೂಜೆ ಹಾಗೂ ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿರುವುದಾಗಿ ಅವರು ತಿಳಿಸಿದ್ದಾರೆ.