ಸುಂಟಿಕೊಪ್ಪ, ಜ. 8: ಅಂದು ಸ್ವಾತಂತ್ರ್ಯ ಹೋರಾಟಗಾರರು ನಮಗೆ ಸ್ವಾತಂತ್ರ್ಯ ನೀಡಿದ್ದಾರೆ, ಇಂದು ದೇಶದ ಗಡಿ ಕಾಯುತ್ತಿರುವ ಸೈನಿಕರು ನಮ್ಮನ್ನು ರಾತ್ರಿ ಹಗಲೆನ್ನದೇ ಕಾಯುತ್ತಿದ್ದಾರೆ. ಯುವ ಜನಾಂಗ ಹೆಚ್ಚು ದೇಶದ ರಕ್ಷಣೆಯಲ್ಲಿ ತೊಡಗಿಕೊಂಡು ಸ್ವಾತಂತ್ರ್ಯ ಹೋರಾಟಗಾರರಿಗೆ ಆ ಮೂಲಕ ಗೌರವ ಸಮರ್ಪಿಸಿ ಎಂದು ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸುಂಟಿಕೊಪ್ಪ ಹೋಬಳಿ ಕಸಾಪ ಇದರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ದಿ. ಎಂ.ಎಲ್. ಗಂಗಾಧರ್ ಶೇಟ್ ಮತ್ತು ಸುಲೋಚನ ಸ್ಮರಣಾರ್ಥ ‘ಸ್ವಾತಂತ್ರ್ಯ ಹೋರಾಟಗಾರರ ನೆನಪು’ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಬೆಳ್ಳಿಯಪ್ಪ ಮಾತನಾಡಿ, ಭಗತ್ ಸಿಂಗ್, ವಿ.ಡಿ. ಸಾವರ್ಕರ್, ಲಾಲಾ ಲಜಪತ್ ರಾಯ್, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ದುಡಿದ ಹೋರಾಟಗಾರರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಾ ಅವರಿಗೆ ಗೌರವ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸೈನಿಕ ಮತ್ತು ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿನ್ನಪ್ಪ, ಕಾಡುಗಳನ್ನು ನಾಶಮಾಡದೇ ಉಳಿಸುವ ಕೆಲಸ ಮಾಡಬೇಕು. ಆನೆಕಾಡು ರಸ್ತೆ ಬದಿಯಲ್ಲಿ ಬಹಳಷ್ಟು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಅರಣ್ಯಗಳನ್ನು ಉಳಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಪ್ರತಿಯೊಬ್ಬರೂ ಮನೆಯ ಸುತ್ತ ಗಿಡಗಳನ್ನು ನೆಟ್ಟು ಉತ್ತಮ ಪರಿಸರ, ಗಾಳಿ ಸಿಗುವಂತೆ ಮಾಡಬೇಕು ಎಂದು ಹೇಳಿದರು.

ದತ್ತಿ ಸ್ಥಾಪಕ ಗೋಣಿಕೊಪ್ಪ ಜಯಲಕ್ಷ್ಮಿ ಜುವೆಲ್ಲರ್ಸ್ ಮಾಲೀಕ ಮೋಹನ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ಮಾತನಾಡಿದರು.

ಈ ಸಂದರ್ಭ ಕಸಾಪ ವತಿಯಿಂದ ದತ್ತಿ ಸ್ಥಾಪಕ ಮೋಹನ್ ಅವರನ್ನು ಸ್ಮಾನಿಸಲಾಯಿತು. ಸುಂಟಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಿ. ನರಸಿಂಹ, ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಬಿ. ವಿನ್ಸೆಂಟ್, ಹೋಬಳಿ ಕಸಾಪ ಅಧ್ಯಕ್ಷ ಸುನಿಲ್, ಸದಸ್ಯ ಶಶಿಕುಮಾರ್ ರೈ, ಮಾಜಿ ಅಧ್ಯಕ್ಷ ವಹೀದ್ ಜಾನ್, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ರಾಜು ರೈ, ಉಪನ್ಯಾಸಕರಾದ ಸೋಮಚಂದ್ರ, ಪಿಲಿಫ್ ವಾಸ್ ಇದ್ದರು.

ಉಪನ್ಯಾಸಕರಾದ ಈಶ ನಿರೂಪಿಸಿ, ಜಯಶ್ರೀ ವಂದಿಸಿದರು.