ಗೋಣಿಕೊಪ್ಪಲು, ಜ. 8: ಶ್ರೀಮಂಗಲ ಹೋಬಳಿ ಬೀರುಗ ಗ್ರಾಮದ ಕಳ್ಳಿಚಂಡ ಮುತ್ತಣ್ಣ ಎಂಬವರಿಗೆ ಸೇರಿದ ಸುಮಾರು ರೂ. 25 ಸಾವಿರ ಮೌಲ್ಯದ ಕೊಯ್ಲು ಮಾಡಲಾದ ಕಾಫಿಯನ್ನು ಕಳವು ಮಾಡಿರುವುದಾಗಿ ಇಂದು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.ಬೀರುಗ ಗ್ರಾಮದ ಸರ್ವೆ ನಂ. 20/1 ಹಾಗೂ ಸರ್ವೆ ನಂ. 69ರಲ್ಲಿ ತಾ. 7 ರಂದು ಸುಮಾರು 55 ಚೀಲಗಳಷ್ಟು ಹಣ್ಣು ಕಾಫಿಯನ್ನು ಕೊಯ್ಲು ಮಾಡಿ ಕಾಫಿ ಕಣಕ್ಕೆ ಸಾಗಿಸಲು ಸಂಜೆ ರಸ್ತೆ ಬದಿಯಲ್ಲಿ ಇಡಲಾಗಿದ್ದು, ಮೂವರು ಆರೋಪಿಗಳು ಮತ್ತು ನಾಲ್ವರು ಕಾರ್ಮಿಕರ ನೆರವಿನಿಂದ ಪಿಕ್‍ಅಪ್ ಜೀಪಿನಲ್ಲಿ ಕಳವು ಮಾಡಿರುವುದಾಗಿ ಆರೋಪಿಸಲಾಗಿದೆ.

ಕಾಫಿ ಕೃಷಿಕರಾದ ಕೆ.ಯು. ಮುತ್ತಣ್ಣ ಅವರಿಗೆ ಸುಮಾರು 76 ವರ್ಷ ವಯಸ್ಸಾಗಿದ್ದು, ಅನಾರೋಗ್ಯ ಪೀಡಿತರಾಗಿದ್ದು, ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ.

ಪಿರ್ಯಾದುದಾರರ ಕಾರ್ಮಿಕ ರಾದ ಶಿವಣ್ಣ ಮತ್ತು ರವಿ ಎಂಬವರು ಆರೋಪಿಗಳ ಕೃತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರು ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಮೇರೆ ಯು.ಎಸ್. ಕಿರಣ್‍ಕುಮಾರ್, ಎಂ. ದೇವಯ್ಯ, ಕೆ. ಸಿದ್ಧು ಹಾಗೂ ನಾಲ್ವರು ಕಾರ್ಮಿಕರ ವಿರುದ್ಧ ಶ್ರೀಮಂಗಲ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಫಿ ಕಳವು ಮಾಡಲಾದ ಆರೋಪಿಗಳ ವಿರುದ್ಧ ಈ ಹಿಂದೆಯೂ ಕೆಲವು ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.

-ಟಿ.ಎಲ್.ಎಸ್.