ಕೂಡಿಗೆ, ಜ. 8: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು, ಮದಲಾಪುರ, ಕಾಳಿದೇವನ ಹೊಸೂರು ವ್ಯಾಪ್ತಿಯಲ್ಲಿ ಸುಮಾರು ಎರಡು ತಿಂಗಳಿನಿಂದ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಈ ವ್ಯಾಪ್ತಿಯಲ್ಲಿ ಬೆಳೆದ ಬೆಳೆಗಳನ್ನು ಕಾಡಾನೆಗಳು ನಷ್ಟಪಡಿಸಿವೆ.

ಅಲ್ಲದೆ, ಕಳೆದ ರಾತ್ರಿ ವಾಸು ಎಂಬವರಿಗೆ ಸೇರಿದ ಒಂದು ಎಕರೆ ಪ್ರದೇಶದ ಬಾಳೆ ಬೆಳೆಯನ್ನು ತಿಂದು ತುಳಿದು ಭಾರಿ ನಷ್ಟಪಡಿಸಿವೆ. ವಾಸು ಅವರು ಅಂದಾಜು ನಾಲ್ಕು ಲಕ್ಷ ವೆಚ್ಚದಲ್ಲಿ ಬಾಳೆ ಬೆಳೆಯನ್ನು ಬೆಳೆದಿದ್ದು, ಇನ್ನೇನು ಕಟಾವು ಮಾಡಲು ಎರಡು ಮೂರು ದಿನಗಳು ಉಳಿದಿದ್ದು, ಬೆಳೆಯನ್ನು ನಾಶಪಡಿಸಿವೆ. ಸ್ಥಳಕ್ಕೆ ತಾಲೂಕು ಅರಣ್ಯ ಅಧಿಕಾರಿ ಶಮ, ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದರು.