ಮಡಿಕೇರಿ, ಜ. 8: ಗಾಳಿಬೀಡುವಿನ ಜವಹಾರ್‍ಲಾಲ್ ನವೋದಯ ಕೇಂದ್ರೀಯ ವಿದ್ಯಾಲಯದ ಮೂಲಭೂತ ಸಮಸ್ಯೆಗಳನ್ನು ಮುಂದಿನ ನಾಲ್ಕು ತಿಂಗಳಲ್ಲಿ ಪರಿಹರಿಸಲಾಗುವುದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು. ಶಾಲೆಯಲ್ಲಿ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಮಿತಿ ಪ್ರಮುಖರು, ಪೋಷಕರ ದೂರುಗಳ ಹಿನ್ನೆಲೆ ಇಂದು ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭ ವಿದ್ಯಾಲಯದ ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರಿನ ಸಮಸ್ಯೆ, ಶಿಥಿಲಗೊಂಡಿರುವ ಕಟ್ಟಡಗಳು ಮಳೆಯಿಂದ ಸೋರುವುದು, ಶೌಚಾಲಯಗಳಲ್ಲಿ ನಿರ್ವಹಣೆಯಿಲ್ಲದೆ ಸಮಸ್ಯೆ, ನೀರಿನ ಕೊರತೆ, ಕೊಠಡಿಗಳ ಸಮಸ್ಯೆ ಮುಂತಾದ ಕುರಿತು ಪ್ರತಾಪ್ ಸಿಂಹ ವೀಕ್ಷಣೆ ಮಾಡಿದರು. ವಿದ್ಯಾಲಯ ಸಮಿತಿ ಹಾಗೂ ಪೋಷಕರ ಪ್ರತಿನಿಧಿಗಳ ದೂರುಗಳನ್ನು ಆಲಿಸಿದ ಸಂಸದರು, ಶಾಲಾ ಪ್ರಾಂಶುಪಾಲರು ಮತ್ತು ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿದರು.ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗಾಳಿಬೀಡು ನವೋದಯ ವಿದ್ಯಾಲಯವು ಎರಡು ದಶಕಗಳ ಹಿಂದಿನ ಕಟ್ಟಡಗಳಿಂದ ಕೂಡಿದ್ದು, ಇಲ್ಲಿನ ಗಾಳಿ-ಮಳೆಯ ಪರಿಣಾಮ ಸಾಕಷ್ಟು ಸಮಸ್ಯೆ ಕಾಣಿಸಿಕೊಂಡಿದ್ದಾಗಿದೆ ಎಂದು ಬೊಟ್ಟು ಮಾಡಿದರು. ಈ ಬಗ್ಗೆ ಆದಷ್ಟು ಶೀಘ್ರ ಸಂಸದರ ನಿಧಿಯಿಂದ ಸಾಧ್ಯವಿರುವ ಮಟ್ಟಿಗೆ ರಿಪೇರಿ ಕೆಲಸ ಮಾಡಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ನೂತನ ವಸತಿಗೆ ಸ್ಥಳಾಂತರಈಗಾಗಲೇ ನವೋದಯ ಶಾಲೆ ಆವರಣದಲ್ಲಿ ರೂ. 3 ಕೋಟಿ ವೆಚ್ಚದಲ್ಲಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಎರಡು ಪ್ರತ್ಯೇಕ ವಸತಿ ನಿಲಯಗಳ ಕಾಮಗಾರಿ ಪೂರ್ಣಗೊಂಡಿದ್ದು, ಅವುಗಳ ಸಣ್ಣಪುಟ್ಟ ಕೆಲಸ ಪೂರ್ಣಗೊಂಡ ಬಳಿಕ ಉದ್ಘಾಟನೆಯೊಂದಿಗೆ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಂಸದರು ತಿಳಿಸಿದರು.
ಅಲ್ಲದೆ ಹಳೆಯ ಕಟ್ಟಡದಲ್ಲಿ ಶಿಥಿಲಗೊಂಡಿರುವ ಪೈಪ್‍ಗಳನ್ನು ಬದಲಾಯಿಸಿ
(ಮೊದಲ ಪುಟದಿಂದ) ಹೊಸ ಪೈಪ್‍ಗಳನ್ನು ಅಳವಡಿಸುವ ಮೂಲಕ ನೀರಿನ ಸಮಸ್ಯೆ ನಿವಾರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಸೋರುವಿಕೆ ತಡೆಗೆ ಕ್ರಮ
ಶಾಲಾ ಕಟ್ಟಡಗಳ ಅಲ್ಲಲ್ಲಿ ಮಳೆಗಾಲ ಸೋರುತ್ತಿದ್ದು, ಸೋರುವಿಕೆ ತಡೆಗೆ ಮತ್ತು ಇತರ ಕಾಮಗಾರಿಗೆ ಈಗಾಗಲೇ ಶಾಲೆಯಿಂದ ರೂ. 6.92 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಈ ನಿಧಿ ಬಿಡುಗಡೆ ಸಂಬಂಧ ನವೋದಯ ವಿದ್ಯಾಲಯಗಳ ಆಡಳಿತ ಆಯುಕ್ತರ ಗಮನ ಸೆಳೆದು ಕಟ್ಟಡಕ್ಕೆ ಕಾಯಕಲ್ಪದೊಂದಿಗೆ ಸೋರುವಿಕೆ ತಡೆಗಟ್ಟಲು ಕ್ರಮವಹಿಸಲಾಗುವುದು ಎಂದರು.
ಮಕ್ಕಳೊಂದಿಗೆ ಸಮಾಲೋಚನೆ
ನವೋದಯ ಮಕ್ಕಳೊಂದಿಗೆ ಕುಂದು ಕೊರತೆಗಳನ್ನು ಚರ್ಚಿಸಿದ ಸಂಸದ ಪ್ರತಾಪ್ ಸಿಂಹ, ತಾವು ಕೂಡ ಹೆಣ್ಣು ಮಗುವಿನ ತಂದೆಯಾಗಿದ್ದು, ಶಾಲೆಯ ಮಕ್ಕಳ ಕಷ್ಟ ಗಮನಕ್ಕೆ ಬಂದಿದೆ; ತಮ್ಮ ಮಗಳ ಶಾಲೆಯೆಂಬ ಆಶಯದಿಂದ ಇಲ್ಲಿನ ಸಮಸ್ಯೆಗಳನ್ನು ಮುಂದಿನ ಆರು ತಿಂಗಳೊಳಗೆ ಸಂಪೂರ್ಣ ಪರಿಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ನವೋದಯ ಶಾಲೆಗೆ ಬೇರೆ ಬೇರೆ ಉದ್ಯಮಿಗಳು, ವಾಣಿಜ್ಯ ಸಂಕೀರ್ಣಗಳಿಂದ ಬೇಕಾಗುವ ಉತ್ಪನ್ನಗಳನ್ನು ಕ್ರೋಢೀಕರಿಸಿ ಸಹಾಯಹಸ್ತ ನೀಡಲಾಗಿದೆ ಎಂದು ನೆನಪಿಸಿಕೊಂಡ ಅವರು, ಗಾಳಿಬೀಡು ಶಾಲೆ ಮಕ್ಕಳಿಗೂ ಮೂಲಭೂತ ಸೌಕರ್ಯದ ಕೊರತೆ ಉಂಟಾಗದಂತೆ ಗಮನ ಹರಿಸಲಾಗುವುದು ಎಂದರು. ಇಂತಹ ಸಮಸ್ಯೆಗಳ ಬಗ್ಗೆ ಮಕ್ಕಳು ಕಾಲಕಾಲಕ್ಕೆ ಪೋಷಕರು ಮತ್ತು ಶಿಕ್ಷಕರ ಗಮನ ಸೆಳೆದು, ತಮಗೆ ಮಾಹಿತಿ ಒದಗಿಸಬೇಕೆಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ಪೋಷಕರ ಸಮಿತಿಯ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ನಗರಸಭೆ ಮಾಜಿ ಸದಸ್ಯ ಕೆ.ಎಸ್. ರಮೇಶ್, ಕಾಳಚಂಡ ಅಪ್ಪಣ, ಪಿ.ಜಿ. ಸುಕುಮಾರ್ ಮೊದಲಾದವರು ಹಾಜರಿದ್ದರು. ಪ್ರಾಂಶುಪಾಲ ಐಸಾಕ್, ಶಿಕ್ಷಕರು, ಸಿಬ್ಬಂದಿ ಹಾಜರಿದ್ದು, ವಿದ್ಯಾರ್ಥಿ ನಿಲಯಗಳೊಂದಿಗೆ, ತಮ್ಮ ವಸತಿಗಳ ಮೂಲಭೂತ ಸೌಕರ್ಯದ ಕೊರತೆ ಕುರಿತು ಸಂಸದರ ಗಮನ ಸೆಳೆದರು.