ಕೂಡಿಗೆ, ಜ. 8: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆ ಹೊಸೂರು ಗ್ರಾಮದ ಮುಖ್ಯರಸ್ತೆಯಲ್ಲಿ ರಾತ್ರಿ ಸುಮಾರು 10 ಗಂಟೆ ಸಂದರ್ಭ ಚಿರತೆ ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಆನೆ ಕಾವಲಿಗೆ ಜಮೀನುಗಳಿಗೆ ತೆರಳುತ್ತಿದ್ದ ರೈತರು ಜೇನುಕಲ್ಲು ಬೆಟ್ಟ ಕಾಡಂಚಿನ ಸಮೀಪದ ಮುಖ್ಯರಸ್ತೆ ದಾಟಿ ಮನೆಯತ್ತ ಬರುತ್ತಿದ್ದ ಚಿರತೆಯನ್ನು ಕಂಡು ಭಯಭೀತ ರಾಗಿದ್ದಾರೆ. ನಂತರ ಗ್ರಾಮಸ್ಥರೆಲ್ಲ ಸೇರಿ, ಪಟಾಕಿ ಸಿಡಿಸಿ ಚಿರತೆಯನ್ನು ಕಾಡಿನತ್ತ ಓಡಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಪ್ರತ್ಯಕ್ಷಗೊಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.