ಮಡಿಕೇರಿ, ಜ.8: ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಗಳಲ್ಲಿ ಮಾರ್ಚ್ ಅಂತ್ಯದೊಳಗೆ ಘನ ತ್ಯಾಜ್ಯ ನಿರ್ವಹಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಹಾಗೂ ಪಿಡಿಒಗಳು ಅಗತ್ಯ ಕ್ರಮಕೈಗೊಳ್ಳಬೇಕೆಂದು ಜಿ.ಪಂ ಸಿಇಒ ಕೆ.ಲಕ್ಷ್ಮೀಪ್ರಿಯ ಅವರು ತಿಳಿಸಿದರು.

ನಗರದ ಜಿ.ಪಂ.ನೂತನ ಸಭಾಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಹಾಗೂ ಹಸಿರು ದಳ, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಘನ ತ್ಯಾಜ್ಯ ನಿರ್ವಹಣೆ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಛತೆಯ ನಿರ್ವಹಣೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳ ಸಂಪೂರ್ಣ ಸಹಕಾರ ಅತ್ಯಗತ್ಯವಾಗಿದ್ದು, ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಮಾರ್ಚ್ 30 ರ ಒಳಗೆ ಸಮರ್ಪಕವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡುವಂತೆ ಸೂಚಿಸಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಘನ ತ್ಯಾಜ್ಯ ಹಾಗೂ ಕಸ ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮಗಳು ಮಾದರಿಯಾಗಿದ್ದು ಇತರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಿದಲ್ಲಿ ಸಂಪೂರ್ಣವಾಗಿ ಕಸದ ಸಮಸ್ಯೆ ಇಲ್ಲದಂತಾಗುತ್ತದೆ ಎಂದು ಹೇಳಿದರು.

ಸ್ವಚ್ಛತೆಯೊಂದಿಗೆ ಪಂಚಾಯಿತಿಗಳ ಸಮರ್ಪಕ ಅಭಿವೃದ್ಧಿ ಸಾಧ್ಯ, ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಜಿಲ್ಲೆಯಾದ್ಯಂತ ಯಶಸ್ವಿಗೊಳಿಸುವುದರೊಂದಿಗೆ ಪ್ರಗತಿ ಸಾಧಿಸಲು ಎಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.

ಹಸಿರುದಳದ ಕಬೀರ್ ಅರೋರ ಅವರು ಘನ ತ್ಯಾಜ್ಯ ನಿರ್ವಹಣೆ ಕಾಯ್ದೆ-ಉಪವಿಧಿಗಳು ಮತ್ತು ನಿಯಮಗಳು ಹಾಗೂ ಗ್ರಾಮ ಪಂಚಾಯತಿಗಳ ಯಶೋಗಾಥೆ ಕುರಿತು ಮಾಹಿತಿ ನೀಡಿದರು.

ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ ರೌಂಡ್ ಟೇಬಲ್‍ನ ಡಾ.ಶಾಂತಿ ತುಮ್ಮಾಲ ಅವರು, ಪ್ಲಾಸ್ಟಿಕ್ ನಿಷೇಧ ಮತ್ತು ಶೂನ್ಯ ತ್ಯಾಜ್ಯ ಸಾಧನೆ-ಎಚ್ ಎಸ್,ಆರ್ ಯಶೋಗಾಥೆ ಮತ್ತು ‘ಗ್ರೀನ್ ದಿ ರೆಡ್’ ಕ್ಯಾಂಪೇನ್ {ಪರ್ಯಾಯ ಮಹಿಳೆಯರ ವೈಯುಕ್ತಿಕ ಶುಚಿತ್ವ} ಕುರಿತು ತಿಳಿಸಿದರು.

ವಾಸುಕಿ ಅಯ್ಯಂಗಾರ್ ಅವರು ಸರಳ ವಿಧಾನದಲ್ಲಿ ಹಸಿಕಸದಿಂದ ಗೊಬ್ಬರ ತಯಾರಿಕೆ ಮತ್ತು ಮಣ್ಣಿನ ಆರೋಗ್ಯದ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.

ಕಾರ್ಯಾಗಾರದಲ್ಲಿ ಸ್ವಚ್ಛ ಭಾರತ್ ಮಿಷನ್‍ನ ಜಿಲ್ಲಾ ಸಂಚಾಲಕರಾದ ಡಿ.ಡಿ.ಪೆಮ್ಮಯ್ಯ, ಜಿ.ಪಂ.ಅಧಿಕಾರಿಗಳು, ಜಿಲ್ಲೆಯ ವಿವಿಧ ಗ್ರಾ.ಪಂ.ಅಧ್ಯಕ್ಷರುಗಳು, ಪಿಡಿಒಗಳು ಇತರರು ಇದ್ದರು. ಉಪಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್ ಮಿಷನ್ ನೋಡೆಲ್ ಅಧಿಕಾರಿ ಗುಡೂರು ಭೀಮಸೇನ ಅವರು ಸ್ವಾಗತಿಸಿದರು.