*ಗೋಣಿಕೊಪ್ಪಲು, ಜ. 8: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ 10 ದಿನಗಳ ಕಾಲ ನಡೆದ ಮಂಗಳೂರು, ಪುತ್ತೂರು, ಸುಳ್ಯ, ಮಡಿಕೇರಿ ಭಾಗದ ಎನ್‍ಸಿಸಿ ಕೆಡೆಟ್‍ಗಳ ತರಬೇತಿ ಶಿಬಿರ ಮುಕ್ತಾಯ ಗೊಂಡಿತು.

ಶಿಬಿರದಲ್ಲಿ ರೈಫಲ್ ಶೂಟಿಂಗ್, ಡ್ರಿಲ್, ಮ್ಯಾಪ್ ರೀಡಿಂಗ್, ವಿಚಾರಗೋಷ್ಠಿ, ಪರಿಸರ ವೀಕ್ಷಣೆ ಮೊದಲಾದ ಕಾರ್ಯಕ್ರಮಗಳು ಜರುಗಿದವು. ಕೆಡೆಟ್‍ಗಳು ಸಾರ್ವಜನಿಕರಲ್ಲಿ ಪರಿಸರ ಸ್ವಚ್ಛತೆ, ಪರಿಸರ ಸಂರಕ್ಷಣೆ ಮೊದಲಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಜಾಥಾ ನಡೆಸಿದರು. ಸಮವಸ್ತ್ರ ಧರಿಸಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆಸಿದ ಜಾಥಾ ಸಾರ್ವಜನಿಕರ ಗಮನಸೆಳೆಯಿತು. ಲೆಫ್ಟಿನೆಂಟ್ ಕರ್ನಲ್ ಎನ್.ಎಸ್. ಸಿಂಗ್, ಕಾಪ್ಸ್ ಶಾಲೆ ಎನ್‍ಸಿಸಿ ಅಧಿಕಾರಿ ಬಿ.ಎಂ. ಗಣೇಶ್. ಶಿಬಿರದ ನೇತೃತ್ವ ವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಾಪ್ಸ್ ಪ್ರಾಂಶುಪಾಲ ಬೆನ್ನಿಕೊರಿಯ ಕೋಸ್, ಎನ್‍ಸಿಸಿ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿರುತ್ತಾರೆ. ಅವರ ನಡೆದ, ಶಿಸ್ತು ಇತರರಿಗೆ ಮಾದರಿಯಾಗಿರಬೇಕು ಎಂದು ಹೇಳಿದರು.

ಎನ್‍ಸಿಸಿ ವಿದ್ಯಾರ್ಥಿಗಳಿಂದ ವಿಭಿನ್ನವಾದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಮಂಗಳೂರಿನ ಹುಲಿ ವೇಷ, ಕೊಡಗಿನ ನೃತ್ಯ ಗಮನಸೆಳೆದವು. ಶಿಬಿರದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ನಿಲ ಸೋಮಣ್ಣ ಎಕ್ಸಲೆನ್ಸ್ ಪ್ರಶಸ್ತಿ ಪಡೆದರು.

ಕುಶಾಲನಗರ ಪಾಲಿಟೆಕ್ನಿಕ್ ಕಾಲೇಜಿನ ಎನ್‍ಸಿಸಿ ಅಧಿಕಾರಿ ದಿನೇಶ್ ವಿ.ಸಿ., ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಧಿಕಾರಿ ಬೀನಾ, ಲೀಪಾಕ್ಷಿ, ಮಡಿಕೇರಿ ಜನರಲ್ ತಿಮ್ಮಯ್ಯ ವಿದ್ಯಾಸಂಸ್ಥೆಯ ಈರಪ್ಪ, ಕೂಡಿಗೆ ಸೈನಿಕ್ ಶಾಲೆಯ ವೆಂಕಟರಮಣ, ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೋಟಲೆ, ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಮಂಜುನಾಥ್ ತರಬೇತಿ ನೀಡಿದರು.