ಶನಿವಾರಸಂತೆ, ಜ. 8: ಶನಿವಾರಸಂತೆ ಸುಪ್ರಜ ಗುರುಕುಲ ಶಾಲೆಯ ವಿದ್ಯಾರ್ಥಿ ತಂಡ ಹಾಗೂ ಶಿಕ್ಷಕರ ತಂಡ ಶನಿವಾರಸಂತೆಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಗೆ ಹೊಸ ವರ್ಷದ ಶುಭಾಶಯ ಕೋರಿದರು.

ಶನಿವಾರಸಂತೆ ಠಾಣಾಧಿಕಾರಿ ಕೃಷ್ಣನಾಯಕ್ ಅವರೊಂದಿಗೆ ವಿದ್ಯಾರ್ಥಿಗಳು ಮಾತನಾಡಿ, ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ, ಕಾನೂನು ನಿಯಮಗಳು ಕರ್ತವ್ಯ ನಿಭಾಯಿಸುವ ಬಗ್ಗೆ, ಅಪರಾಧ ಪ್ರಕರಣಗಳ ಬಗ್ಗೆ, ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಸಂಬಂಧಗಳ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.

ವಿದ್ಯಾರ್ಥಿಗಳಲ್ಲಿ ಕಾನೂನು ನಿಯಮಗಳ ಕುರಿತಾದ ಆಸಕ್ತಿ ಮನೋಭಾವನೆಗೆ ಶ್ಲಾಘಿಸಿದ ಕೃಷ್ಣನಾಯಕ್ ವಿದ್ಯಾರ್ಥಿಗಳನ್ನು ಕುರಿತು ವಿದ್ಯಾರ್ಥಿಗಳು ಕಾನೂನು ನಿಯಮಗಳ ಬಗ್ಗೆ ಅರಿವು ಬೆಳೆಸಿಕೊಂಡರೆ ಮುಂದೆ ಸಮಾಜದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತದೆ. ಮಕ್ಕಳ ಮೇಲೆ ಲೈಂಗಿಕ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ 2012 ರಲ್ಲಿ ಪೋಕ್ಸೋ ಕಾಯಿದೆ ಜಾರಿಗೊಳಿಸಲಾಗಿದ್ದು, ಈ ನಿಟ್ಟಿನಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಸಂದರ್ಭ ತಡಮಾಡದೆ ಮಕ್ಕಳು ಮತ್ತು ಪೋಷಕರು ಪೊಲೀಸರಿಗೆ ದೂರು ನೀಡಿದರೆ ಅಂಥವರ ವಿರುದ್ಧ ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆ ಕ್ರಮ ತೆಗೆದುಕೊಂಡು ಪೋಕ್ಸೋ ಕಾಯಿದೆ ಪ್ರಕಾರ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಪೋಕ್ಸೋ ಕಾಯಿದೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್, ಶಿವಲಿಂಗ, ಸಿಬ್ಬಂದಿಗಳಾದ ಶಫೀರ್, ಚನ್ನಕೇಶವ, ಮುರಳಿ, ಪರಮೇಶ, ಲೋಕೇಶ್, ಬೋಪಣ್ಣ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.