ಕೂಡಿಗೆ, ಜ. 8: ಕೂಡಿಗೆ ಆರೋಗ್ಯ ಕೇಂದ್ರಕ್ಕೆ ಶೀಘ್ರದಲ್ಲಿ ಖಾಯಂ ವೈದ್ಯರನ್ನು ನೇಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್ ಭರವಸೆ ನೀಡಿದ್ದಾರೆ.

ವೈದ್ಯರ ನೇಮಕಕ್ಕೆ ಆಗ್ರಹ ಎಂಬ ಶೀರ್ಷಿಕೆಯಡಿಯಲ್ಲಿ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಅವರು ಸ್ಪಂದಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ವೈದ್ಯರ ಕೊರತೆ ಇದ್ದು, ಈಗಾಗಲೇ ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಲಾಗುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಚರ್ಚಿಸಿದ್ದು, ಆರೋಗ್ಯ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ವೈದ್ಯರ ಕೊರತೆ ಇರುವ ಆಸ್ಪತ್ರೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದರ ಬಗ್ಗೆ ಸಚಿವರು ಸಚಿವಾಲಾಯದ ಅಧಿಕಾರಿಗಳೊಂದಿಗೆ ಪ್ರಸ್ತಾಪ ಮಾಡಲಾಗಿದ್ದು, ಶೀಘ್ರದಲ್ಲಿ ಖಾಯಂ ವೈದ್ಯರ ನೇಮಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.