ಮಡಿಕೇರಿ, ಜ. 7: ಸ್ವಚ್ಛ, ಸಮೃದ್ಧ ಮತ್ತು ಸುಸ್ಥಿರ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಮೊಬಿಯಸ್ ಫೌಂಡೇಷನ್, ಕಾಫಿ ಪ್ಲಾಂಟೇಷನ್‍ನ ಕಾಶಿ ಎನಿಸಿದ ಕೊಡಗು ಜಿಲ್ಲೆಯಲ್ಲಿ ಸ್ಥಳೀಯ ಪ್ರಬೇಧದ, ವಿನಾಶದ ಅಂಚಿನಲ್ಲಿರುವ 5500 ಗಿಡಗಳನ್ನು ನೆಟ್ಟಿದ್ದು, ಐದು ವರ್ಷಗಳ ಕಾಲ ಇದನ್ನು ಪೋಷಿಸಲಿದೆ.

ಕೊಡಗು ಜಿಲ್ಲೆಯಲ್ಲಿ ಗಿಡಮರಗಳು ಇಲ್ಲದ ಬಂಜರು ಭೂಮಿಯಲ್ಲಿ ಈ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಪುಷ್ಪಗಿರಿ ಬೆಟ್ಟ ಪ್ರದೇಶದ ದೊಡ್ಡಬೆಟ್ಟೆಯಲ್ಲಿ 4500 ಗಿಡಗಳನ್ನು ನೆಡಲಾಗಿದ್ದು, ನಾಪೊಕ್ಲು ಪ್ರಥಮ ದರ್ಜೆ ಕಾಲೇಜು ಮತ್ತು ಪ್ರೌಢಶಾಲೆ ಆವರಣದಲ್ಲಿ 1000 ಸಸಿಗಳನ್ನು ಬೆಳೆಸಿದೆ. ಕಣಿವೆ, ಐಗೂರು ಮತ್ತು ಹಾರಂಗಿ ಅರಣ್ಯ ನರ್ಸರಿಗಳಲ್ಲಿ ಬೆಳೆದ ಸ್ಥಳೀಯ ಪ್ರಬೇಧಗಳ ಗಿಡಗಳನ್ನೇ ಇಲ್ಲಿ ಬೆಳೆಸಲಾಗಿದೆ. ಹಲಸು, ಬಿದಿರು, ನೇರಳೆÀ, ಜಂಬುನೇರಳೆ, ನೆಲ್ಲಿ, ಅತ್ತಿ, ಗೋಳಿ, ಕಹಿಬೇವು ಮತ್ತು ಬಸವನಪಾದ ಮತ್ತಿತರ ಗಿಡಗಳು ಇದರಲ್ಲಿ ಸೇರಿವೆ. ಎಲ್ಲ ಗಿಡಗಳು ಉಳಿಯುವಂತೆ ನೋಡಿಕೊಳ್ಳುವ ಸಲುವಾಗಿ ಐದು ವರ್ಷಗಳ ಕಾಲ ಇವುಗಳ ಪಕ್ಕದ ಕಳೆ ತೆಗೆದು, ನೀರು ಮತ್ತು ಗೊಬ್ಬರ ಹಾಕಿ ಪೋಷಿಸಲಾಗುತ್ತದೆ ಎಂದು ಮೊಬಿಯಸ್ ಫೌಂಡೇಷನ್ ಅಧ್ಯಕ್ಷ ಪ್ರದೀಪ್ ಬರ್ಮನ್ ತಿಳಿಸಿದ್ದಾರೆ.