ಶನಿವಾರಸಂತೆ: ಸಮೀಪದ ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ ಬೆಂಗಳೂರಿನ ಸೇವಾ ಇಂಟರ್ ನ್ಯಾಷನಲ್ ವತಿಯಿಂದ ರೂ. 40 ಸಾವಿರ ಮೌಲ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಕೋಪಕರಣಗಳನ್ನು ಕೊಡುಗೆ ನೀಡಲಾಯಿತು.

ಕಲಿಕೋಪಕರಣಗಳನ್ನು ವಿತರಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿಂದು ಮಾಧವ ಕೆರೂರ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೋಪಕರಣಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಶ್ರದ್ಧೆಯಿಂದ ಅಧ್ಯಯನ ಮಾಡಿ ಭವಿಷ್ಯದ ವಿಜ್ಞಾನಿಗಳಾಗಬೇಕು ಎಂದು ಕರೆ ನೀಡಿದರು.

ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಹಿರಿಯ ವ್ಯವಸ್ಥಾಪಕ ಅನಿಲ್ ಜೋಷಿ ಶಾಲೆಯ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಕಲಿಕೆ ಬಗ್ಗೆ ಹುರಿದುಂಬಿಸಿದರು. ಎಸ್.ವಿ.ವೈ.ಎಂ.ನ ಕಾರ್ಯಕ್ರಮ ಆಯೋಜಕ ಕೆ.ಟಿ. ಪ್ರಕಾಶ್, ಮಾರ್ಗದರ್ಶಿ ಶಿಕ್ಷಕ ಮಂಜುನಾಥ್, ಪ್ರದೀಪ್, ಶಿವರಾಜ್, ಪ್ರಭಾರ ಮುಖ್ಯ ಶಿಕ್ಷಕ ಸಿ. ದೇವರಾಜ್, ವಿಜ್ಞಾನ ಶಿಕ್ಷಕ ಪ್ರವೀಣ್ ಕಾಮತ್ ಇತರ ಶಿಕ್ಷಕರು ಹಾಜರಿದ್ದರು.ಗೋಣಿಕೊಪ್ಪಲು: ಪ್ರಸ್ತುತ ತಂತ್ರಜ್ಞಾನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ; ತಂತ್ರಜ್ಞಾನದ ಸದ್ಬಳಕೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾರ್ಗದರ್ಶನವಾಗಬೇಕೆಂದು ಸಮಾಜ ಸೇವಕ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು. ದೇವರಪುರ ಸಮೀಪದ ಶ್ರೀ ರಾಜರಾಜೇಶ್ವರಿ ವಿದ್ಯಾನಿಕೇತನದಲ್ಲಿ ಆಯೋಜನೆಗೊಂಡಿದ್ದ 24ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವಿದ್ಯಾರ್ಥಿಯಲ್ಲಿಯೂ ಪ್ರತಿಭೆಗಳು ಅಡಗಿರುತ್ತದೆ. ಇವುಗಳನ್ನು ಹೊರ ಹಾಕಲು ಅವಕಾಶಗಳು ಸಿಗುವಂತಾಗಬೇಕು ಎಂದರು.

ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಹಯಗ್ರೀವ ಆಚಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಶಿವಪ್ಪ ಈ ಭಾಗದಲ್ಲಿ ಗ್ರಾಮೀಣ ಮಕ್ಕಳಿಗೆ ಇಂಗ್ಲೀಷ್ ವಿದ್ಯಾಭ್ಯಾಸದಿಂದ ವಂಚಿತರಾಗುವುದನ್ನು ಮನಗಂಡು ಇಲ್ಲಿಯ ವಿದ್ಯಾಸಂಸ್ಥೆಯು ಆಂಗ್ಲ ಮಾಧ್ಯಮ ಆರಂಭಿಸಿದೆ ಎಂದರು. ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ಮಾತನಾಡಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಸನು ಮಾಡಲು ಅಧ್ಯಾಪಕರೊಂದಿಗೆ ಹೆತ್ತವರು ವಿಶೇಷ ಗಮನ ಹರಿಸಬೇಕು ಎಂದರು. ಮುಖ್ಯೋಪಾಧ್ಯಾಯ ಶಶಿಧರ್, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಪವಿತ್ರ ಹಾಗೂ ಸೆಲಿನ್ ನಿರೂಪಿಸಿದರು. ರಕ್ಷ ತಂಡ ಪ್ರಾರ್ಥಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಕುಲ್ಲೇಟೀರ ಪ್ರವಿ ಮೊಣ್ಣಪ್ಪ, ಪ್ರಾಥಮಿಕ ಶಾಲೆಯ ಮುಖ್ಯೋಪ್ಯಾದ್ಯಾಯರು, ಶಿಕ್ಷಕವೃಂದ, ಮುಂತಾದವರು ಹಾಜರಿದ್ದರು. ಸುತ್ತಮುತ್ತಲಿನ ಗ್ರಾಮದ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮಡಿಕೇರಿ: ಸಮಗ್ರ ಶಿಕ್ಷಣ ಕರ್ನಾಟಕ, ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಶಾಲಾ ಮಕ್ಕಳಿಗೆ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ವಿದ್ಯಾರ್ಥಿಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕೊಡಗು ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬದ ಶಿಬಿರದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ‘ವೈಜ್ಞಾನಿಕ ಮನೋಭಾವ ಬೆಳವಣಿಗೆ’ ಮತ್ತು ‘ಪವಾಡ ರಹಸ್ಯ ಬಯಲು ಕಾರ್ಯಕ್ರಮ’ ಏರ್ಪಡಿಸಲಾಗಿತ್ತು.

ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ‘ಪವಾಡ ರಹಸ್ಯ ಬಯಲು ಕಾರ್ಯಕ್ರಮ’ ನಡೆಸಿಕೊಟ್ಟ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷರೂ ಆದ ಸಂಪನ್ಮೂಲ ವ್ಯಕ್ತಿ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಭಾಷಾ ಅಧ್ಯಾಪಕ ಎಂ.ಎನ್. ವೆಂಕಟ ನಾಯಕ್, ಮಕ್ಕಳಿಗೆ ವಿವಿಧ ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯದ ವಿವರಣೆಯೊಂದಿಗೆ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ, ವಿದ್ಯಾರ್ಥಿಗಳು ತಮ್ಮನ್ನು ಕಲಿಕೆಯಲ್ಲಿ ಕುತೂಹಲ ಹಾಗೂ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ.ಪ್ರೇಮಕುಮಾರ್, ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಕಂದಾಚಾರ, ಮೌಢ್ಯ ನಿವಾರಣೆ ಮುಂತಾದ ವೈಚಾರಿಕ ಚಿಂತನೆಗಳಿಗೆ ಉತ್ತಮ ವೇದಿಕೆ ಒದಗಿಸುವ ಮೂಲಕ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಲಾಗುತ್ತಿದೆ ಎಂದರು.

ಕೊಡಗು ಜಿಲ್ಲಾ ಲೇಖಕರು ಮತ್ತು ಕಲಾವಿದರ ಸಂಘದ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮೂಢನಂಬಿಕೆಗಳು ನಿವಾರಣೆಯಾಗಬೇಕು ಎಂದರು. ಕಾರ್ಯಕ್ರಮದ ಸಂಯೋಜಕಿ ಎಂ.ಜೆ.ಗಂಗಮ್ಮ ಮಾತನಾಡಿದರು.

ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಕಾಶೀನಾಥ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ, ಬಿಆರ್‍ಸಿ ಪುಟ್ಟರಂಗನಾಥ್, ಶಾಲಾ ಮುಖ್ಯ ಶಿಕ್ಷಕ ಬಿ.ಶಿವರಾಂ, ಸಂಪನ್ಮೂಲ ವ್ಯಕ್ತಿಗಳಾದ ಡಿ.ಚಂದನ, ಆರ್.ದಿವಾಕರ್, ಪಿ.ಯು.ರಂಜಿತ್, ಡಿ.ಎಂ.ರೇವತಿ ಇತರರು ಇದ್ದರು.

-ಟಿ.ಜಿ. ಪ್ರೇಮಕುಮಾರ್