ಕೂಡಿಗೆ, ಜ. 7: ಶಿರಂಗಾಲ ಸರಕಾರಿ ಪದವಿಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಎಫ್.ಸಿ.ಸಿ. ವತಿಯಿಂದ ಸ್ವಯಂ ಸೇವಕರಿಗೆ ಕೋಟೆಬೆಟ್ಟದಲ್ಲಿ ಚಾರಣ, ಮಲ್ಲಳ್ಳಿ ಜಲಪಾತದಲ್ಲಿ ಸ್ವಚ್ಛತೆ ಎಂಬ ಘೋಷವಾಕ್ಯದ ಅಡಿಯಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಯಿತು. ಸ್ವಯಂ ಸೇವಕರು ಅತ್ಯಂತ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಲ್ಲಳ್ಳಿ ಜಲಪಾತದ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚೀಟಿಗಳು ಇತರೆ ವಸ್ತುಗಳನ್ನು ಸ್ವ -ಇಚ್ಛೆಯಿಂದ ಮನೆಯಿಂದ ತಂದ ಚೀಲಗಳಲ್ಲಿ ಸಂಗ್ರಹಿಸಿ ಮೇಲ್ಭಾಗದಲ್ಲಿ ಅದಕ್ಕಾಗಿ ಇರುವ ಕಸದ ತೊಟ್ಟಿಯಲ್ಲಿ ವಿದ್ಯಾರ್ಥಿಗಳು ಕಸವನ್ನು ಸುರಿದು, ಸ್ವಚ್ಛತೆಯ ಅರಿವನ್ನು ಮೂಡಿಸಿದರು.

ನಂತರ ಕೋಟೆಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಚಾರಣ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಕಿ.ಮೀ. ದೂರ ನಡೆದು ಈಶ್ವರ ದೇವಾಲಯಕ್ಕೆ ತೆರಳಿದರು. ಪ್ರಕೃತಿ ಸಿರಿಯ ಮಹಿಮೆಯನ್ನು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮಾಧಿಕಾರಿ ಸಿಎಸ್ ಹೇಮಲತಾ ಚಾರಣದ ಮಹತ್ವವನ್ನು ಸ್ವಯಂಸೇವಕರಿಗೆ ವಿವರಿಸಿದರು. ಕಾಲೇಜಿನ ಉಪನ್ಯಾಸಕ ವೃಂದ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲ ನೀಡಿ ಸಹಕರಿಸಿದರು.