ಸೋಮವಾರಪೇಟೆ, ಜ. 7: ದನ ಕರುಗಳಿರುವ ಗ್ರಾಮಗಳು ರೋಗಮುಕ್ತವಾಗಿರುತ್ತವೆ. ಪ್ರತಿದಿನ ಸಗಣಿ, ಗಂಜಲ ತುಳಿದರೆ ಕಾಲುಗಳಿಗೆ ರೋಗಗಳು ಬರುವದಿಲ್ಲ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಸ್.ವಿ. ಬಾದಾಮಿ ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸೋಮವಾರಪೇಟೆ ಪಶುಪಾಲನೆ ಇಲಾಖೆ ಹಾಗು ಗೌಡಳ್ಳಿ ಪಶು ಚಿಕಿತ್ಸಾಲಯದ ವತಿಯಿಂದ ಹಿರಿಕರ ಗ್ರಾಮದಲ್ಲಿ ಆಯೋಜಿಸಿದ್ದ ಪಶು ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಮಲೆನಾಡು ಹೈನುಗಾರಿಕೆಗೆ ಪೂರಕವಾಗಿದ್ದು, ಗ್ರಾಮೀಣ ಭಾಗದ ಜನರು ದನಕರುಗಳನ್ನು ಸಾಕುವದನ್ನು ನಿಲ್ಲಿಸಬಾರದು ಎಂದರು. ಹೈನುಗಾರಿಕೆ ಲಾಭದಾಯಕವಾಗಿದೆ. ಪ್ರತಿದಿನ ಹಾಲು ಮೊಸರು ಬೇಕು. ಆದರೆ ಹಸುಗಳನ್ನು ಸಾಕುವದಕ್ಕೆ ರೈತರು ಕಷ್ಟ ಎನ್ನುತ್ತಾರೆ. ಕಷ್ಟಪಡದೆ ಸುಖವನ್ನು ನಿರೀಕ್ಷೆ ಮಾಡಬಾರದು ಎಂದು ಕಿವಿಮಾತು ನುಡಿದ ಅವರು, ಹಸುಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಹೊಟ್ಟೆಯ ಹುಳುಗಳಿಗೆ ಎರಡು ತಿಂಗಳಿಗೊಮ್ಮೆ ಔಷಧಿ ನೀಡಲೇಬೇಕು. ಪಶು ವೈದ್ಯರ ಸಲಹೆಯನ್ನು ಪಡೆಯುತ್ತಿರಬೇಕು ಎಂದರು.

ಗೌಡಳ್ಳಿ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಸತೀಶ್ ಮಾತನಾಡಿ, ರಾಷ್ಟ್ರೀಯ ಕೃತಕ ಗರ್ಭಧಾರಣಾ ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉನ್ನತ ಹಾಗೂ ಹೆಚ್ಚು ಉತ್ಪಾದನಾ ಸಾಮಥ್ರ್ಯಯುಳ್ಳ ಜೆರ್ಸಿ, ಹೆಚ್.ಎಫ್, ಗೀರ್, ಸಾಹಿವಾಲ್ ಮತ್ತು ಮುರ್ರಾ ತಳಿಯ ವೀರ್ಯ ನಳಿಕೆಗಳು ಲಭ್ಯವಿದ್ದು ಈ ಯೋಜನೆಯಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಶಿಬಿರದಲ್ಲಿ ಸಾಮಾನ್ಯ ಚಿಕಿತ್ಸೆ, ಗರ್ಭಧಾರಣೆ, ಕೃತಕ ಗರ್ಭಧಾರಣೆ, ಬರಡುರಾಸುಗಳ ಚಿಕಿತ್ಸೆಯೊಂದಿಗೆ, ಸಾಕು ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ಹಾಕಲಾಯಿತು. ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾಪಂ ಅಧ್ಯಕ್ಷೆ ನಾಗರತ್ನ, ತಾಪಂ ಸದಸ್ಯೆ ಕುಸುಮಾ ಅಶ್ವಥ್, ಹಿರಿಕರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಪಿ. ಸುರೇಶ್, ಮಾಜಿ ಅಧ್ಯಕ್ಷ ಹೆಚ್.ಎನ್. ಶಿವರಾಜ್, ಪಶುಪಾಲನ ಇಲಾಖೆಯ ಸಿಬ್ಬಂದಿಗಳಾದ ಧರ್ಮರಾಜ್, ಬಿ.ಬಿ. ಲೋಕೇಶ್, ಸರ್ವರ್ ಪಾಷ, ತೀರ್ಥಪ್ರಸಾದ್ ಉಪಸ್ಥಿತರಿದ್ದರು.