ವೀರಾಜಪೇಟೆ, ಜ.6: ಸಮಾಜದ ಎಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ವಾಣಿಜ್ಯೀಕರಣಗೊಂಡಿರುವುದರಿಂದ ಶಿಕ್ಷಣ ಕ್ಷೇತ್ರ ಸವಾಲುಗಳನ್ನು ಎದುರಿಸುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ. ಸಮೀಪದ ಅರಮೇರಿಯ ಎಸ್.ಎಂ.ಎಸ್. ವಿದ್ಯಾಪೀಠದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ “ಕರುನಾಡ ವೈಭವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು. “ಸಮಾಜದ ಉನ್ನತವರ್ಗದವರಂತೆ ಮಧ್ಯಮ ಮತ್ತು ಕೆಳ ವರ್ಗದವರೂ ಗುಣಮಟ್ಟದ ಶಿಕ್ಷಣವನ್ನು ಹೊಂದಲು ಗ್ರಾಮೀಣ ಭಾಗದ ವಿದ್ಯಾಸಂಸ್ಥೆಗಳು ನೆರವಾಗಿವೆ. ವಿದ್ಯಾರ್ಥಿಗಳು ಪರೀಕ್ಷೆಗಳ ಫಲಿತಾಂಶದೊಂದಿಗೆ ವೈಯಕ್ತಿಕ ಸವಾಲುಗಳನ್ನು ಎದುರಿಸಲೂ ಶಕ್ತರಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿದ್ದ ಹುಣ ಸೂರು ತಾಲೂಕು ಗಾವಡಗೆರೆಯ ಓಂ ಶ್ರೀ ಗುರುಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿ, “ಪ್ರಸಕ್ತ ದಿನಗಳಲ್ಲಿ ಬುದ್ದಿವಂತಿಕೆಯೆ ಹೆಚ್ಚಳಕ್ಕೆ ಸಾಕಷ್ಟು ಮಾರ್ಗಗಳನ್ನು ಆಧುನಿಕ ಮಾನವ ಕಂಡು ಹಿಡಿದಿದ್ದಾನೆ. ಆದರೆ ಬುದ್ದಿವಂತಿಕೆ ಹೆಚ್ಚಾದಂತೆ ಹೃದಯಗಳು ಸಂಕುಚಿತ ಗೊಳ್ಳುತ್ತಿರುವುದು ದುರದೃಷ್ಟಕರ. ಶಿಕ್ಷಣ ಬದುಕಿನ ಆಲೋಚನೆಗಳನ್ನು ಜೀವನದ ಉದ್ದೇಶಗಳನ್ನೂ ನಿರ್ಣಯಿಸಬೇಕು. ಅಂಕೆಗಳಷ್ಟೆ ಸಂಬಂಧಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದರು.

ಎಸ್.ಎಂ.ಎಸ್. ವಿದ್ಯಾಪೀಠದ ಕಾರ್ಯದರ್ಶಿ, ನಿವೃತ್ತ ಕೆ.ಎ.ಎಸ್. ಅಧಿಕಾರಿ ಜೆ.ಎಸ್.ವಿರೂಪಾಕ್ಷಯ್ಯ, ಕೊಡಗು ಜಿಲ್ಲಾ ಪಂಚಾಯ್ತಿಯ ಸದಸ್ಯ ಮೂಕೊಂಡ

(ಮೊದಲ ಪುಟದಿಂದ) ಶಶಿ ಸುಬ್ರಮಣಿ ಉಪಸ್ಥಿತರಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಠಾಧಿಪತಿಗಳೂ ವಿದ್ಯಾಪೀಠದ ಮುಖ್ಯಸ್ಥರೂ ಆದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಾಂಶುಪಾಲೆ ಕೆ.ಪಿ.ಕುಸುಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಮೊಣ್ಣಪ್ಪ ಸ್ವಾಗತಿಸಿದರು. ದಿವ್ಯ, ನೀಲಮ್ಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಮೂಡಿಬಂದ ಜಾನಪದ ಹಿನ್ನಲೆಯ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯಿತು.