ಗೋಣಿಕೊಪ್ಪ, ಜ. 6: ಎಲ್ಲರೂ ನಿದ್ರಿಸುತ್ತಿರುವ ಸಮಯ. ಆದರೆ ನಿದ್ರೆಯನ್ನು ಬದಿಗೊತ್ತಿ ಇರುವ ಆಕಾಶದ ಚಂದ್ರನ ಬೆಳಕು, ತಮ್ಮ ಮೊಬೈಲ್, ಟಾರ್ಚ್ ಬೆಳಕಿನ ಸಹಾಯದಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕೈಯಲ್ಲಿರುವ ಬಂದೂಕುಗಳ ಧೈರ್ಯದಿಂದ ಕಾಫಿ ತೋಟಕ್ಕೆ ಎಂಟ್ರಿಕೊಟ್ಟ ಪೊಲೀಸ್, ಅರಣ್ಯ ಸಿಬ್ಬಂದಿಗಳು ಒಂದೇ ಸಮನೆ ತೋಟದಲ್ಲಿ ಹುಡುಕಾಟ ಆರಂಭಿಸಿದರು. ಸಮಯ ಜಾರುತ್ತಿದ್ದರೂ ಫಲಿತಾಂಶ ಮಾತ್ರ ಸಿಕ್ಕಿರಲಿಲ್ಲ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಕಾಡಾನೆ, ಹುಲಿಯ ಭಯವನ್ನು ಲೆಕ್ಕಿಸದೆ ತೋಟದ ಮಧ್ಯೆ ಹುಡುಕಾಟ ನಡೆಸುತ್ತಲೇ ಬೆಳಕು ಹರಿಸಿದರು.! ಕೂಲಿಯನ್ನು ಅರಸಿ ದೂರದ ತಮಿಳುನಾಡಿನಿಂದ ಕೊಡಗಿನತ್ತ ಸಂಸಾರ ಸಹಿತವಾಗಿ ಆಗಮಿಸಿದ ಕುಟುಂಬವೊಂದು ಶ್ರೀಮಂಗಲ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದ ಪೆಮ್ಮಂಡ ರಾಜ ಅವರ ಕಾಫಿ ತೋಟದಲ್ಲಿ ಕಾಫಿ ಕುಯ್ಯುವ ಕೆಲಸಕ್ಕೆ ಸೇರಿಕೊಂಡಿದ್ದರು. ಎರಡು ದಿನಗಳ ಹಿಂದೆ ಆಗಮಿಸಿದ್ದ ಈ ಕಾರ್ಮಿಕ ಕುಟುಂಬ ಭಾನುವಾರ ತಮ್ಮ ಕಾಯಕ ಆರಂಭಿಸಿದ್ದರು. ಒಂದು ವರ್ಷ 9 ತಿಂಗಳ ನಿತ್ಯಶ್ರೀ ಎಂಬ ಕಂದಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಕಾರ್ಮಿಕರಾದ ಸೀತಾ, ನಾಗರಾಜು ಭಾನುವಾರ ಮುಂಜಾನೆ ಕಾಫಿ ಕುಯ್ಯಲು ಆರಂಭಿಸಿದ್ದರು. ಜೊತೆಯಲ್ಲಿಯೇ ಪುಟ್ಟ ಕಂದಮ್ಮ ಹೆತ್ತವರೊಂದಿಗೆ ತೋಟದಲ್ಲಿಯೇ ಆಟವಾಡುತ್ತಿತ್ತು. ಮಧ್ಯಾಹ್ನ ಆಗುತ್ತಿದ್ದಂತೆಯೇ ಊಟ ಮುಗಿಸಿದ ಕುಟುಂಬ ಮತ್ತೆ ಕೆಲಸ ಆರಂಭಿಸಿತ್ತು.

ಈ ಸಂದರ್ಭ ಕಂದಮ್ಮಳು ನಿದ್ರೆಗೆ ಜಾರಿದ್ದಳು. ಇದನ್ನು ಕಂಡ ಹೆತ್ತ ತಾಯಿ ಮಗುವನ್ನು ನಿದ್ರಿಸಲು ಕಾಫಿ ಗಿಡಕ್ಕೆ ಸೀರೆಯಲ್ಲಿ ತೊಟ್ಟಿಲು ಕಟ್ಟಿ ಮಲಗಿಸಿ ತಮ್ಮ ಕೆಲಸವನ್ನು ಮತ್ತೆ ಆರಂಭಿಸಿದ್ದರು. ಕೆಲಸದ ನಡುವೆ ಮಗು ಎಚ್ಚರವಾಗಿದ್ದು ಅರಿವಿಗೆ ಬಾರಲೇ ಇಲ್ಲ. ಸಂಜೆಯಾಗುತ್ತಿದ್ದಂತೆ ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಬರಲು ಹೋದ ಹೆತ್ತ ತಾಯಿಗೆ ಆಘಾತ ಕಾದಿತ್ತು. ಮಲಗಿದ್ದ ಮಗು ಅಲ್ಲಿರಲಿಲ್ಲ.! ಕಿರುಚಾಡಿಕೊಂಡು ತೋಟದ ಸುತ್ತ ಮುತ್ತ ಇತರ ಕಾರ್ಮಿಕರೊಂದಿಗೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ತೋಟ ಹಾಗೂ ಇತರ ಕಾರ್ಮಿಕರು ಸೀತಾ, ನಾಗರಾಜು ರವರಿಗೆ ಹೊಸಬರಾಗಿದ್ದರು. ತೋಟದ ಪರಿಚಯ ಇವರಿಗಿರಲಿಲ್ಲ. ಕತ್ತಲೆ ಆವರಿಸುತ್ತಿದ್ದಂತೆಯೇ ತೋಟದಲ್ಲಿ ಸಂಚರಿಸಲು ಭಯಪಟ್ಟ ಕಾರ್ಮಿಕರು ಮನೆಗೆ ವಾಪಸಾ ್ಸಗಿದ್ದರು. ತೋಟದ ಮಾಲೀಕರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರು.

(ಮೊದಲ ಪುಟದಿಂದ) ತಡ ಮಾಡದ ಕುಟ್ಟ ಸಿಪಿಐ ಪರಶಿವಮೂರ್ತಿ ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಹಾಗೂ ಎಸ್ಪಿ ಸುಮನ್ ಡಿ. ಪಣ್ಣೇಕರ್ ಅವರ ಸೂಚನೆಯಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆಗೆ ನಿರ್ಧಾರ ಕೈಗೊಂಡರು. ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಕೈಯಲ್ಲಿ ಬಂದೂಕು ಹಿಡಿದು ತೋಟ ಪ್ರವೇಶಿಸುತ್ತಿದ್ದಂತೆಯೇ, ಇವರನ್ನು ಹಿಂಬಾಲಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕತ್ತಲೆಯ ನಡುವೆ ಕಾರ್ಯಾಚರಣೆ ಆರಂಭಿಸಿದರು. ಕಾಫಿ ತೋಟದ ಸಮೀಪವೇ ಬ್ರಹ್ಮಗಿರಿಯ ಅರಣ್ಯ ಪ್ರದೇಶವಿರುವುದರಿಂದ ಹಾಗೂ ಈ ಭಾಗದಲ್ಲಿ ಕಾಡಾನೆಗಳು ಹಾಗೂ ಹುಲಿ ಹಾವಳಿಗಳು ನಿರಂತರವಾಗಿರುವುದರಿಂದ ಎರಡು ಇಲಾಖೆಯ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತೋಟ ಹಾಗೂ ಸಮೀಪದ ಅರಣ್ಯ ಪ್ರದೇಶದಲ್ಲಿ ಕೂಬಿಂಗ್ ಕಾರ್ಯಾಚರಣೆ ನಡೆಸಿದರು. ವಿಸ್ತಾರವಾದ ತೋಟವನ್ನು ಜಾಲಾಡಿದರೂ ಮಗುವಿನ ಸುಳಿವು ದೊರೆಯದೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಂಗಾಲಾಗಿದ್ದರು.

ಮಗುವನ್ನು ವನ್ಯ ಪ್ರಾಣಿಗಳು ಹೊತ್ತೊಯ್ದಿರಬಹುದೆಂದು ಭಾವಿಸಿದ್ದರು. ಆದರೂ ಕತ್ತಲೆ ನಡುವೆ ಹುಡುಕಾಟ ಮುಂದುವರೆಯುತ್ತಲೇ ಇತ್ತು. ಕುಡಿಯಲು ನೀರು, ಊಟವಿಲ್ಲದೆ ಸಿಬ್ಬಂದಿಗಳು ನಿತ್ರಾಣಗೊಂಡಿದ್ದರು. ಆದರೂ ಕಾರ್ಯಾಚರಣೆ ಜವಾಬ್ದಾರಿ ಹೊತ್ತಿದ್ದ ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮಾತ್ರ ಸಿಬ್ಬಂದಿಗಳಿಗೆ ಹುರಿದುಂಬಿಸಿ ಕಾರ್ಯಾಚರಣೆ ನಡೆಸುತ್ತಲೇ ಬಂದಿದ್ದರು. ಮಧ್ಯರಾತ್ರಿ ಕಳೆದರೂ ಮಗುವಿನ ಸುಳಿವೂ ಮಾತ್ರ ಸಿಗಲೇ ಇಲ್ಲ. ಮುಂಜಾನೆ 4ರವರೆಗೆ ಮತ್ತೆ ಕಾರ್ಯಾಚರಣೆ ಬೇರೆ ಬೇರೆ ತಂಡವಾಗಿ ತೋಟವನ್ನು ಜಾಲಾಡಿತ್ತು. ತೋಟದಲ್ಲಿ ಪೊಲೀಸರ, ಅರಣ್ಯ ಸಿಬ್ಬಂದಿಗಳ ಬೂಟಿನ ಸದ್ದುಗಳು ಕೇಳಿ ಬರುತ್ತಿದ್ದವೇ ವಿನಾಃ ಮಗುವಿನ ಚೀರಾಟ, ಅಳುವಿನ ಶಬ್ಧ ಮಾತ್ರ ಎಲ್ಲಿಯೂ ಕೇಳಿ ಬರುತ್ತಿರಲಿಲ್ಲ. ಅಷ್ಟೊತ್ತಿಗಾಗಲೇ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಘಟನಾ ಸ್ಥಳಕ್ಕೆ ತೆರಳಿ ಇತರ ಸಿಬ್ಬಂದಿಗಳೊಂದಿಗೆ ತೋಟ ಪ್ರವೇಶಿಸಿ ಕಾರ್ಯಾಚರಣೆಗೆ ಮತ್ತಷ್ಟು ಹುರುಪು ತುಂಬಿದರು. ಇಷ್ಟಾದರೂ ಸಿಬ್ಬಂದಿಗಳು ಮಗುವಿನ ಸುಳಿವನ್ನು ಹಿಡಿದೇ ತೀರುವ ನಿಟ್ಟಿನಲ್ಲಿ ದೃತಿಗೆಡದೆ ತಮ್ಮ ಹುಡುಕಾಟ ಮುಂದುವರೆಸಿದ್ದರು. ಕೊರೆಯುವ ಚಳಿಯ, ಮಂಜಿನ ನಡುವೆ ವನ್ಯ ಪ್ರಾಣಿಗಳ ಭಯವಿಲ್ಲದೆ ಹುಡುಕುತ್ತಲೇ ಸಮಯ ಮುಂಜಾನೆ 6 ಗಂಟೆ ಕಳೆದು ಹೋಯಿತು. ಸೂರ್ಯನ ಕಿರಣಗಳು ಮೆಲ್ಲನೆ ಬೆಳಕು ಚೆಲ್ಲುತ್ತಿದ್ದಂತೆ ಇನ್ನೇನು ಕಾರ್ಯಾಚರಣೆಗೆ ವಿರಾಮ ಹೇಳಬೇಕು ಅನ್ನುವಷ್ಟರಲ್ಲಿ ಒಂದು ತಂಡಕ್ಕೆ ಮಗುವಿನ ಸುಳಿವು ಸಿಕ್ಕೆ ಬಿಟ್ಟಿತು.

ಕಾರ್ಯಾಚರಣೆಯಲ್ಲಿದ್ದ ಎಲ್ಲ ಸಿಬ್ಬಂದಿಗಳು ಅಬ್ಬಾ... ಎನ್ನುತ್ತ ಓಡೋಡಿ ಬಂದರು. ಮಗು ಮಾತ್ರ ಏನೂ ಅರಿವಿಲ್ಲದಂತೆ ಕಾಫಿ ಗಿಡದ ಅಡಿಯಲ್ಲಿ ಕೊರೆಯುವ ಚಳಿಯಲ್ಲಿ ತೋಟದಲ್ಲಿನ ಸೊಳ್ಳೆ ಕಚ್ಚಿಸಿಕೊಂಡು ಸುಮ್ಮನೆ ಕುಳಿತ್ತಿತ್ತು.! 20ಕ್ಕೂ ಅಧಿಕ ಅರಣ್ಯ, ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಗೆ ಕೊನೆಗೂ ಯಶಸ್ಸು ದೊರೆಯಿತು. ಕಳೆದು ಹೋಗಿದ್ದ ಮಗುವನ್ನು ರಕ್ಷಿಸಿ ತರುವಲ್ಲಿ ಯಶ ಕಂಡರು. ಮಗುವನ್ನು ಕಳೆದುಕೊಂಡ ಹೆತ್ತವರು ಕಂದಮ್ಮನನ್ನು ಎದೆಗಪ್ಪಿಕೊಂಡು ಸಮಾಧಾನದ ನಿಟ್ಟುಸಿರು ಬಿಟ್ಟರು.

ನಡು ರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಿದವರಲ್ಲಿ ಪೊಲೀಸ್ ಇಲಾಖೆಯ ಶ್ರೀಮಂಗಲ ಠಾಣೆಯ ಠಾಣಾಧಿಕಾರಿ ದಿನೇಶ್ ಕುಮಾರ್, ಕುಟ್ಟ ಠಾಣೆಯ ಠಾಣಾಧಿಕಾರಿ ಚಂದ್ರಪ್ಪ, ಎಎಸ್‍ಐ ಅರುಣ, ಸಿಬ್ಬಂದಿಗಳಾದ ರವಿ, ವಿಶ್ವನಾಥ್, ಧನಂಜಯ್ಯ, ಸ್ವಾಮಿ, ಶರತ್, ಎಎಸ್‍ಐ ಸಣ್ಣಪ್ಪ, ಸಿಬ್ಬಂದಿಗಳಾದ ರಂಜಿತ್, ಮನೋರಂಜನ್, ಕೃಷ್ಣಮೂರ್ತಿ, ಮೋಹನ್, ವಿನಾಯಕ ಹೀರೆಮಠ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಶ್ರೀಮಂಗಲ ಆರ್‍ಎಫ್‍ಓ ವೀರೇಂದ್ರ ಮರಿ ಬಸವಣ್ಣನವರ್ ಮುಂದಾಳತ್ವದಲ್ಲಿ ಅರಣ್ಯ ಸಿಬ್ಬಂದಿಗಳಾದ ಹರೀಶ್, ಗಜೇಂದ್ರ, ದಿಲಕ್ಷ, ಪೊನ್ನಣ್ಣ, ಹರ್ಷಿತ್, ದೀಕ್ಷಿತ್, ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಹಾಗೂ ಕೆಲವು ಗ್ರಾಮಸ್ಥರು ಭಾಗವಹಿಸಿದ್ದರು. ಪೊಲೀಸರ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆಗೆ ನಾಡಿನ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.