ಮಡಿಕೇರಿ, ಡಿ. 5: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಶ್ರಯದಲ್ಲಿ ಇಂದು ಸಮಾಜ ಬಾಂಧವರಿಗೆ ಪ್ರತಿಭಾ ಸ್ಪರ್ಧೆ; ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇಲ್ಲಿನ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತ್ರಿಮತಸ್ಥರು ಪಾಲ್ಗೊಂಡಿದ್ದರು.ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಯೋಗ ಶಿಕ್ಷಣ ಉಪನ್ಯಾಸಕ ವಿನಾಯಕ ಕೃಷ್ಣ ಸಮಾರೋಪ ಭಾಷಣ ಮಾಡಿದರು. ಭಾರತೀಯ ಆಯುರ್ವೇದ ಮತ್ತು ಯೋಗ ಪದ್ಧತಿಯಿಂದ ವಿಶ್ವದಲ್ಲಿ ಇಂದು ಮನುಕುಲ ಉತ್ತಮ ಬದುಕು ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯ ನೀಡಿದರು.

ಭಗವಂತ ಶ್ರೀಕೃಷ್ಣ ಗೀತೆಯಲ್ಲಿ ಬೋಧಿಸಿರುವಂತೆ; ಸಂಸ್ಕಾರ ಪೂರ್ಣ ಯೋಗ; ಸರಳ ಆಹಾರ ಕ್ರಮ, ನಿತ್ಯ ಜೀವನ ಕ್ರಮಗಳ ಅನುಷ್ಠಾನದಿಂದ ಬ್ರಾಹ್ಮಣ ಸಮಾಜವು ಶ್ರೇಯಸ್ಸು ಕಂಡುಕೊಳ್ಳುವ ಮೂಲಕ; ಇತರ ಜನಕೋಟಿಯನ್ನು ಸನ್ಮಾರ್ಗದಲ್ಲಿ ಸಮನ್ವಯತೆ ಕಡೆಗೆ ಕೊಂಡೊಯ್ಯಲು ಸಾಧ್ಯವೆಂದು ಅವರು ನೆನಪಿಸಿದರು. ದೇಶ, ಕಾಲ, ಧರ್ಮ, ನ್ಯಾಯ, ಮೈತ್ರಿ ಗುಣಗಳ ಪರಿಪಾಲನೆಯಿಂದ ಸುಭಿಕ್ಷ ಸಮಾಜ ವ್ಯವಸ್ಥೆ ಕಂಡುಕೊಳ್ಳಬಹುದು ಎಂದು ಉಲ್ಲೇಖಿಸಿದ ವಿನಾಯಕ ಕೃಷ್ಣ; ಈ ದಿಸೆಯಲ್ಲಿ ಬ್ರಾಹ್ಮಣ ಸಮುದಾಯದ ಸತ್‍ಚಿಂತನೆ ಸರ್ವತ್ರ ಮುಂದುವರಿಯಲೆಂದು ಆಶಿಸಿದರು. ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ಎ. ಗೋಪಾಲಕೃಷ್ಣ ಸ್ವಾಗತ ಭಾಷಣದೊಂದಿಗೆ; ಶತಮಾನೋತ್ಸವ ಭವನ ನಿರ್ಮಾಣಕ್ಕೆ ತ್ರಿಮತಸ್ಥರು ಕೈಜೋಡಿಸುವಂತೆ ಕರೆ ನೀಡಿದರು.

ಪ್ರತಿಭಾ ಪುರಸ್ಕಾರ : ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ತೋರಿದವರನ್ನು ಗುರುತಿಸಿ; ಈ ಸಂದರ್ಭ ದತ್ತಿನಿಧಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು.

ಸಾಧಕರಿಗೆ ಸನ್ಮಾನ : ಬ್ರಾಹ್ಮಣ ಸಮುದಾಯದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ; ಸನ್ಮಾನ ನೀಡಲಾಯಿತು. ಧಾರ್ಮಿಕ ಕ್ಷೇತ್ರದಿಂದ ಯು. ವಿಠಲ್‍ಭಟ್, ವೈದ್ಯಕೀಯ ರಂಗದಿಂದ ಡಾ. ರಾಧಾಕೃಷ್ಣ,

(ಮೊದಲ ಪುಟದಿಂದ) ಶೈಕ್ಷಣಿಕವಾಗಿ ವಿಜಯಲತಾ ಹರಿಪ್ರಸಾದ್, ಸಮಾಜ ಸೇವೆಯಲ್ಲಿ ಜಿ.ಎಲ್. ನಾಗರಾಜ್, ಸಂಗೀತ ಕ್ಷೇತ್ರದ ಬಾಲಪ್ರತಿಭೆ ಅಶ್ವಿತ್‍ಕುಮಾರ್ ಅವರುಗಳು ಸನ್ಮಾನಕ್ಕೆ ಭಾಜನರಾದರು. ಅಲ್ಲದೆ ತಮ್ಮ ಅನಿಸಿಕೆ ಹಂಚಿಕೊಂಡರು.

ಸ್ಪರ್ಧಿಗಳಿಗೆ ಪುರಸ್ಕಾರ : ಬಾಲವಿಭಾಗದಿಂದ ನರ್ಸರಿ ಮಕ್ಕಳಿಗೆ ಹಾಗೂ ಎಲ್‍ಕೆಜಿ, ಯುಕೆಜಿ ಪುಟಾಣಿಗಳಿಗೆ ಮುತ್ತುಮಣಿ ಹೆಕ್ಕುವದು, ಫ್ಯಾನ್ಸಿಡ್ರೆಸ್ ಹಾಗೂ 1 ರಿಂದ 4ನೇ ತರಗತಿ ಮಕ್ಕಳಿಗೆ ಪರಿಸರ ಕುರಿತು ಚಿತ್ರಕಲೆ ಸ್ಪರ್ಧೆಯೊಂದಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. 5 ರಿಂದ 7ನೇ ತರಗತಿ ಮಕ್ಕಳಿಗೆ ರಸಪ್ರಶ್ನೆ, ಕ್ಯಾಲಿಗ್ರಫಿ ಚಟುವಟಿಕೆ ಜರುಗಿತು.

ಪ್ರೌಢಶಾಲಾ ವಿಭಾಗದ 8 ರಿಂದ 10ನೇ ತರಗತಿ ಮಕ್ಕಳಿಗೆ ಹೂವು, ಹಣ್ಣು, ತರಕಾರಿ ಇತ್ಯಾದಿಗಳಿಂದ ಕ್ಲೇಮಾಡೆಲಿಂಗ್ ಏರ್ಪಡಿಸಲಾಗಿತ್ತು. ಪಿಯುಸಿ ಹಾಗೂ ಮೇಲ್ಪಟ್ಟವರಿಗೆ ರಸಪ್ರಶ್ನೆ ಹಾಗೂ ಮಹಿಳೆಯರಿಗೆ ಬೆಲ್ಲದಿಂದ ಕೊಬ್ಬರಿ ಮಿಠಾಯಿ, ಹೂದಾನಿ ಜೋಡಣೆ ಪೈಪೋಟಿಯಿತ್ತು. ಪುರುಷರಿಗೆ ಶಂಖನಾದ ಸ್ಪರ್ಧೆ; ವಿಶೇಷವಾಗಿ ಪುರುಷರು ಹಾಗೂ ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆ, ಯೋಗಾಸನ ಪ್ರದರ್ಶನವಿತ್ತು. ಎಲ್ಲಾ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಪೇಜಾವರ ಶ್ರೀಗಳಿಗೆ ನಮನ : ಉಡುಪಿ ಪೇಜಾವರ ಅಧೋಕ್ಷ ಮಠದ ಶ್ರೀ ವಿಶ್ವೇಶತೀರ್ಥರು ಪರಂಧಾಮ ಸೇರಿರುವ ಹಿನ್ನೆಲೆ; ನುಡಿ ನಮನದೊಂದಿಗೆ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗೀತಾ ಗಿರೀಶ್ ಹಾಗೂ ನಾಗೇಶ್ ಕಾಲೂರು ಸಮಾಜದ ಪರವಾಗಿ ಶ್ರೀಗಳ ಸಂಸ್ಮರಣೆಗೈದರು. ಸಮಾಜದ ಕಾರ್ಯದರ್ಶಿ ಬಿ.ಕೆ. ಅರುಣ್ ಕುಮಾರ್ ವಂದಿಸಿದರು.