ಮಡಿಕೇರಿ, ಜ. 5: ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಇರುವಂತಹ ಆಯುಷ್ ಇಲಾಖೆಯ ಆಸ್ಪತ್ರೆಗಳನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಸರಕಾರದಿಂದ ರೂ. 1.47 ಕೋಟಿ ಬಿಡುಗಡೆಯಾಗಿದ್ದು; ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಕಾಮಗಾರಿಗಳನ್ನು ಶೀಘ್ರವಾಗಿ ನಿರ್ವಹಿಸುವಂತೆ ಆದೇಶಿಸಲಾಗಿದೆ.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಆಯುಷ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪಂಚಕರ್ಮ ಇತ್ಯಾದಿ ಚಿಕಿತ್ಸೆ ನೀಡಲು ಅನುಕೂಲವಾಗು ವಂತೆ ಪಂಚಾಯತ್ ರಾಜ್ ಇಲಾಖೆಗೆ ರೂ. 31 ಲಕ್ಷದ ಕಟ್ಟಡ ಕಾಮಗಾರಿ ನೀಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಕಾಲದಲ್ಲಿ ಕಾಮಗಾರಿಗಳನ್ನು ಪೂರೈಸದೆ ಇರುವ ಕಾರಣ; ಆಸ್ಪತ್ರೆಗೆ ಬರುವವರಿಗೆ ಒಳರೋಗಿಗಳಾಗಿ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಂತೆಯೇ ಸೋಮವಾರಪೇಟೆ ಆಯುಷ್ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ, ಯೋಗ ತರಬೇತಿ ಇತ್ಯಾದಿ ಅನುಕೂಲಕ್ಕಾಗಿ ಸಭಾಂಗಣ ನಿರ್ಮಿಸಲು ಸಂಬಂಧಿಸಿದ ಜಿ.ಪಂ. ಪಂಚಾಯತ್‍ರಾಜ್ ವಿಭಾಗಕ್ಕೆ ರೂ. 6.90 ಲಕ್ಷ ಹಣ ಮಂಜೂರು ಮಾಡಿದ್ದು; ಶೀಘ್ರವಾಗಿ ಕಾಮಗಾರಿ ನಿರ್ವಹಿಸಲು ಆದೇಶಿಸಲಾಗಿದೆ. ಈ ತಾಲೂಕು ಕೇಂದ್ರದಲ್ಲಿ ಯೋಗ, ಪ್ರಕೃತಿ ಚಿಕಿತ್ಸೆಗೆ ಯೋಜನೆ ರೂಪಿಸಲಾಗಿದೆ.
ಇನ್ನೊಂದೆಡೆ ರೂ. 13.32 ಲಕ್ಷ ವೆಚ್ಚದಲ್ಲಿ; ಕೊಡಗು ಜಿಲ್ಲಾ ಕೇಂದ್ರದ ಆಯುಷ್ ಆಸ್ಪತ್ರೆಯ ಆವರಣದಲ್ಲಿ; ತಡೆಗೋಡೆ ಮತ್ತಿತರ ಕಾಮಗಾರಿ ಬಾಬ್ತು ಹಣ
(ಮೊದಲ ಪುಟದಿಂದ) ಮಂಜೂರು ಮಾಡಲಾಗಿದೆ. ವೀರಾಜಪೇಟೆ ತಾಲೂಕು ಆಯುಷ್ ಆಸ್ಪತ್ರೆ ವೈದ್ಯರ ಕೊಠಡಿ ಹಾಗೂ ರೋಗಿಗಳ ತಪಾಸಣಾ ಕೊಠಡಿಗಾಗಿ ರೂ. 10 ಲಕ್ಷ ಬಿಡುಗಡೆ ಮಾಡಲಾಗಿದೆ. ಇನ್ನು ಕುಶಾಲನಗರ ಆಯುಷ್ ಕಟ್ಟಡಕ್ಕೆ ರೂ. 60 ಲಕ್ಷ ಹಣ ಮಂಜೂರಾಗಿದ್ದು; ಈ ಎಲ್ಲಾ ಕೆಲಸಗಳನ್ನು ಪಂಚಾಯತ್ ರಾಜ್ ಇಲಾಖೆಗೆ ವಹಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಮಹತ್ವದೊಂದಿಗೆ; ಜನತೆಯ ಚಿಕಿತ್ಸೆಗಾಗಿ ವಿಶೇಷ ಔಷಧೋಪಚಾರ, ಪಂಚಕರ್ಮ ಶುಶ್ರೂಚೆಗೆ ಒತ್ತು ನೀಡಿ ಮೂಲಭೂತ ಸೌಕರ್ಯ ಕಲ್ಪಿಸಲು ಹಣ ಮಂಜೂರು ಮಾಡಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳ ವಿಳಂಬ ನೀತಿಯಿಂದ ಕಾಮಗಾರಿ ನಡೆಯದೆ ರೋಗಿಗಳಿಗೆ ಚಿಕಿತ್ಸೆ ಎಟುಕದಾಗಿದೆ ಎಂಬ ಅಸಮಾಧಾನ ಕೇಳಿ ಬರತೊಡಗಿದೆ.