ಸೋಮವಾರಪೇಟೆ, ಜ. 6: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ‘ತೆರೆದ ಪುಸ್ತಕ’ ಪರೀಕ್ಷೆ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸುವ ಪುಸ್ತಕವಾಗಿ ಮಾರ್ಪಟ್ಟಿದ್ದು, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುತ್ತಿದೆ.

ತೆರೆದ ಪುಸ್ತಕ ಪರೀಕ್ಷೆಯಲ್ಲಿ ಹಲವು ಲೋಪದೋಷಗಳು ಕಂಡುಬಂದಿದ್ದು, ತಪ್ಪಾದ ಅಕ್ಷರಗಳು, ಮುದ್ರಣ ದೋಷ, ಅಪೂರ್ಣ ಪ್ರಶ್ನೆಗಳು, ಪ್ರಶ್ನೆಗಳ ಸಂಖ್ಯೆಗಳನ್ನು ಸರಿಯಾಗಿ ನಮೂದು ಮಾಡದೇ ಇರುವದೂ ಸೇರಿದಂತೆ ಹಲವಷ್ಟು ಅಸಂಬದ್ಧಗಳು ಸೇರಿಕೊಂಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಪೋಷಕರಲ್ಲೂ ಗೊಂದಲಕ್ಕೆ ಕಾರಣವಾಗಿದೆ.

ಐವತ್ತು ಅಂಕಗಳ ಹಿಂದಿ ಪ್ರಶ್ನೆ ಪತ್ರಿಕೆಯನ್ನು ಕೈ ಬರಹದ ಮೂಲಕ ಸಿದ್ದಪಡಿಸಿ ಮೂರು ಪುಟಗಳನ್ನು ಬಳಸಿ ಪ್ರಶ್ನೆಯನ್ನು ತಯಾರಿಸಲಾಗಿದೆ. ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಚಿತ್ರಗಳು, ವರ್ಗಮೂಲ ಹಾಗೂ ಕೆಲವು ಸಂಕೇತಗಳನ್ನು ಕೈಯಲ್ಲಿ ಬರೆಯಲಾಗಿದೆ. ಕೈ ಬರಹದ ಪ್ರಶ್ನೆ ಪತ್ರಿಕೆ ತಯಾರು ಮಾಡಿ ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಿರುವದರಿಂದ ಸಹಜವಾಗಿ ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆಯನ್ನು ಸಂಶಯಿಸುವಂತಾಗಿದೆ.

ವಿಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ‘ಸುಣ್ಣದ ಕಲ್ಲು ಕಾಯಿಸಿದಾಗ ಎನ್ನುವ ಪದದ ಬದಲಾಗಿ ಸುಣ್ಣದ ಕಲ್ಲು ಸಾಯಿಸಿದಾಗ’ ಎಂದು ಮುದ್ರಣಗೊಂಡಿದೆ. ಪ್ರಶ್ನೆ ಪತ್ರಿಕೆಯಲ್ಲಿ ಅಂಕಗಳನ್ನು ನಮೂದು ಮಾಡುವ ಸಂದರ್ಭ ಗುಣಾಕಾರ ಚಿಹ್ನೆಯ ಬದಲು ನÀಕ್ಷತ್ರ ಚಿಹ್ನೆ ಬಳಸಲಾಗಿದೆ. ತಪ್ಪಾಗಿ ಮುದ್ರಿತಗೊಂಡಿರುವ ಪ್ರಶ್ನೆಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿಯೂ ಪರೀಕ್ಷೆಯ ಭಯ ಮೂಡುವಂತಾಗಿದೆ.

ಸಾಮಥ್ರ್ಯವನ್ನು ಪರೀಕ್ಷಿಸುವದು, ವಿದ್ಯಾರ್ಥಿಗಳ ಜ್ಞಾನದ ಗಳಿಕೆ ಹಾಗೂ ಪಠ್ಯಪುಸ್ತಕದ ವಿಚಾರಗಳನ್ನು ಸಮರ್ಥವಾಗಿ ಅಭ್ಯಸಿಸಿದ್ದಾರೆಯೇ? ಮತ್ತಿತರ ವಿಚಾರಗಳನ್ನೊಳಗೊಂಡು ಮುಂದಿಟ್ಟುಕೊಂಡು ತೆರೆದ ಪುಸ್ತಕ ಪರೀಕ್ಷೆಯನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ರೂಪಣಾತ್ಮಕ ಮೌಲ್ಯಮಾಪನ ಹಾಗೂ ತೆರೆದ ಪುಸ್ತಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಜಿಲ್ಲಾ ಹಂತದಲ್ಲಿ ತಯಾರಾಗಿ ಎಲ್ಲಾ ಶಾಲೆಗಳ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತಿದೆ.

ಇದನ್ನು ಆಯಾ ಶಾಲೆಯಲ್ಲಿ ಡೌನ್‍ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬೇಕು. ಆದರೆ ಬಹತೇಕ ಅನುದಾನಿತ ಮತ್ತು ಸರಕಾರಿ ಶಾಲೆಗಳಲ್ಲಿ ಅನುದಾನದ ಕೊರತೆಯೊಂದಿಗೆ ಸಮರ್ಪಕ ಸೌಲಭ್ಯಗಳ ಕೊರತೆ ಇದೆ. ಇದರಿಂದಾಗಿ ಕೆಲವು ಶಾಲೆಯಲ್ಲಿ ಶಿಕ್ಷಕರು ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳನ್ನು ಬೋರ್ಡ್ ಮೇಲೆ ಬರೆದು ಪರೀಕ್ಷೆ ನಡೆಸುವಂತಾಗಿದೆ.

ಪೂರ್ವ ಸಿದ್ಧತೆ ಇಲ್ಲದಿರುವದು, ಬದ್ಧತೆ ಇಲ್ಲದ ಯೋಜನೆಗಳಿಂದ ಇಲಾಖೆಗೆ ಶಿಕ್ಷಕರು ಮತ್ತು ಮಕ್ಕಳು ಹಿಡಿಶಾಪವನ್ನು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. 2019 ರಲ್ಲಿ ವರ್ಷ ಪೂರ್ತಿ ಮಕ್ಕಳಿಗೆ ನಾನಾ ಹಂತಗಳಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಪರೀಕ್ಷೆಯನ್ನು ಎದುರಿಸುವ ಕುರಿತು, ಪರೀಕ್ಷೆ ಎಂಬ ಭಯವನ್ನು ಹೋಗಲಾಡಿಸುವ ಬಗ್ಗೆ ಹಾಗೂ ಎಸ್.ಎಸ್.ಎಲ್.ಸಿ. ನಂತರ ಮುಂದೇನು? ಇತ್ಯಾದಿ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಆತ್ಮಸ್ಥೈರ್ಯ ತುಂಬಲಾಗುತ್ತಿತ್ತು.

ಆದರೆ 2020 ರ ಪ್ರಾರಂಭದಲ್ಲಿಯೇ ಮಕ್ಕಳಲ್ಲಿ ವಿನೂತನವಾಗಿ ಪರೀಕ್ಷೆ ನಡೆಸುವ ಮೂಲಕ ಇಲಾಖೆಯೇ ಗೊಂದಲವನ್ನು ಸೃಷ್ಟಿಸಲು ದಾರಿ ಮಾಡಿದೆ. ಇಲಾಖೆಯ ಈ ಕ್ರಮಕ್ಕೆ ಪೋಷಕರಿಂದಲೂ ಅಸಮಾಧಾನ ವ್ಯಕ್ತವಾಗುತ್ತಿದೆ. ತೆರೆದ ಪುಸ್ತಕ ಪರೀಕ್ಷೆ ಮತ್ತು ವಾರ್ಷಿಕ ಪರೀಕ್ಷೆಗೂ ಸಂಬಂಧವೇ ಇಲ್ಲ. ಇದರ ಪರಿಕಲ್ಪನೆಯೇ ಅವೈಜ್ಞಾನಿಕ. ಇದರಿಂದ ವಿದ್ಯಾರ್ಥಿಗಳಿಗೆ ಯಾವದೇ ಪ್ರಯೋಜನ ಇಲ್ಲ ಎಂದು ಹಲವಷ್ಟು ಶಿಕ್ಷಕರು ಪತ್ರಿಕೆಯೊಂದಿಗೆ ಅಭಿಪ್ರಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚ್ಚಾಡೋ ಅವರು, ಜಿಲ್ಲೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕವನ್ನು ಓದುವ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪ್ರಶ್ನೆ ಪತ್ರಿಕೆಯಲ್ಲಿ ಮುದ್ರಣ ದೋಷವಿರುವದು ನಿಜ. ಇದನ್ನು ಸರಿಪಡಿಸಿ ಮುಂದಿನ ಹತ್ತು ದಿನಗಳಲ್ಲಿ ಮರುಪರೀಕ್ಷೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.

-ವಿಜಯ್ ಹಾನಗಲ್