ಕರೋಟಿರ ಶಶಿ ಸುಬ್ರಮಣಿ, ವೀರಾಜಪೇಟೆ.

ಭಾರತವು ವ್ಯಾವಹಾರಿಕ ಮತ್ತು ಆಡಳಿತ ಉದ್ದೇಶಗಳಿಗೆ ಬಳಸುತ್ತಿರುವ ಗ್ರೆಗೊರಿ ಪಂಚಾಂಗದ ಆಧಾರದಲ್ಲಿ (ಧಾರ್ಮಿಕ ಹಬ್ಬಗಳನ್ನು ನಿರ್ಣಯಿಸುವ ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಚಾಂದ್ರಮಾನ, ಸೌರಮಾನ ಪಂಚಾಂಗಗಳನ್ನು ಬಳಸುತ್ತಿವೆ) 1.1.2020 ಬುಧವಾರ ಕನ್ಯಾಲಗ್ನ- ಶತಭಿಷಾ ನಕ್ಷತ್ರದಲ್ಲಿ ಬೆಳಕನ್ನು ಕಂಡಿದೆ. ಭಾರತ ದೇಶ ಈ ವರ್ಷ ತುಂಬಾ ಏಳಿಗೆಯನ್ನು ಕಾಣುವುದು. ಕೆಲವು ಹಿಂದೆ ಸರಿದಿರುವ ವಿಷಯಗಳಲ್ಲೂ ಉನ್ನತ ಹೆಜ್ಜೆ ಇಟ್ಟು ಎಲ್ಲವೂ ಸರಿಯಾಗುವ ಲಕ್ಷಣಗಳಿವೆ ಕೊಡಗೂ ಸೇರಿದಂತೆ ಭಾರತ ದೇಶದ ಶಿಕ್ಷಣ ಉನ್ನತ ಮಟ್ಟವನ್ನೇರುವುದು. ಈ ವರ್ಷದ ಗ್ರಹ ಸಂಚಾರ ಹೆಚ್ಚಾಗಿ ಪ್ರಜಾಪ್ರಭುತ್ವದ ಪರವಾಗಿಯೇ ಇದೆಯೆನ್ನಬಹುದು. ಪ್ರಧಾನ ಮಂತ್ರಿಯವರದ್ದು ವೃಶ್ಚಿಕ ರಾಶಿ, ವೃಶ್ಚಿಕ ಲಗ್ನ- ನೀಚ ಭಂಗರಾಜ ಯೋಗವಿರುವುದರಿಂದ ಅನುರಾಧ ನಕ್ಷತ್ರದವರಾದ ಪ್ರಧಾನಿಯವರಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗುವ ಪ್ರಶಸ್ತಿ ಸಿಗಬಹುದು. ಇನ್ನೊಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರವರು 2020 ನವೆಂಬರ್‍ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಲಕ್ಷಣಗಳಿವೆ.

ಭಾರತದ ಸಾಹಿತಿಗಳು, ಕಲಾಕಾರರು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸುವ ಲಕ್ಷಣಗಳಿವೆ. ನಮ್ಮ ದೇಶದಲ್ಲಿ ಐಷಾರಾಮಿ ರೈಲು ಸಂಚಾರ ಪರಿಚಯವಾಗಬಹುದು. ರೈಲ್ವೆ ಹೋರಾಟ, ಪೋಸ್ಟಲ್ ಹೋರಾಟಗಳನ್ನು ಅಲ್ಲಗಳೆಯುವಂತಿಲ್ಲ. ವಿವಾಹ ವಿಚ್ಚೇದನ ಮೊಕದ್ದಮೆಗಳು ಹೆಚ್ಚಾಗಬಹುದು. ಹಲ್ಲು ನೋವು ಕೊಡಗಿನ ಜನರಿಗೆ ಅಧಿಕವಾಗಬಹುದು. ಭಾರತದ ಪ್ರಜೆಗಳಿಗೂ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಹಿರಿಯ ಸರ್ಕಾರಿ ನೌಕರರು ಸ್ವಇಚ್ಛೆಯಿಂದ ನಿವೃತ್ತಿ ತೆಗೆದುಕೊಳ್ಳಬೇಕಾಗಬಹುದು. ಸರ್ಕಾರಿ ನೌಕರರಿಗೆ ಕಷ್ಟಕಾಲ. ಪ್ರತೀ ಹೆಜ್ಜೆಯಲ್ಲೂ ಎಚ್ಚರವಿರಲಿ. ಮುಂದೆ ನಡೆಯಬೇಕಾದ ವಿಧಾನಸಭಾ ಚುನಾವಣೆಗಳಲ್ಲಿ ಆಡಳಿತ ಪಕ್ಷದೊಂದಿಗೆ ವಿರೋಧ ಪಕ್ಷವೂ ಸಮವಾಗಿ ಕಾದಾಡುವುದು. ಪ್ರಿಯಾಂಕಾ ಗಾಂಧಿಯವರ ಸ್ಥಾನ ಉನ್ನತ ಮಟ್ಟಕ್ಕೇರಬಹುದು. ಅಕ್ಕಿ- ಗೊಧಿಯಂತಹ ಅವಶ್ಯಕತೆಯಿರುವ ಆಹಾರ ಪದಾರ್ಥಗಳಿಗೆ ಬೆಲೆ ಹೆಚ್ಚಾಗಬಹುದು. ‘‘ಸ್ಟ್ರೆಸ್ಸ್’, ಡಿಪ್ರೆಶನ್, ಆತ್ಮಹತ್ಯೆ ಕೇಸ್‍ಗಳು ಹೆಚ್ಚಾಗಬಹುದು. ಹೆಣ್ಣು ಮಕ್ಕಳ ಸಂಖ್ಯೆಯು ಏರುವುದು. ಕೊಡಗಿನಲ್ಲಿ ಬೆಳೆ ನಷ್ಟ ಫಲದಿಂದ ತಮ್ಮ ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವ- ಮಾರುವ ಲಕ್ಷಣಗಳು ಹೆಚ್ಚಾಗಿದೆ. ಕಾವೇರಮ್ಮೆ ತಾಯಿಯು ಅವರೆಲ್ಲರನ್ನೂ ಕಾಪಾಡಲಿ. 2020ರಲ್ಲಿ 6 ಗ್ರಹಣಗಳಿವೆ. (11.1.2020, 6.6.2020, 21.6.2020, 5.7.2020, 30.11.2020, 14.12.2020) ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಸದ್ದಿಲ್ಲದೆ ನಡೆಯುವ ಮೂರು ಗ್ರಹಣಗಳ ಸಂದರ್ಭದಲ್ಲಿ ಭಾರತದ ಮೇಲೆ ಶತ್ರುಪಡೆ ಯುದ್ಧ ಸಾರುವ ಲಕ್ಷಣಗಳಿದೆ. ಹಾಗಾದರೆ ‘ಪಿಓಕೆ’ ಭಾರತದೇಶವಾಗಬಹುದು. ಭಾರತ ಗೆಲುವು ಕಾಣುವುದು. ಕೊಡಗಿನಲ್ಲಿ ತುಲಾ ಸಂಕ್ರಮಣವು 17.10.2020ರಂದು ಆಗುವುದು. ಬೆಳಿಗ್ಗೆ 6 ಗಂಟೆ 51 ನಿಮಿಷದಿಂದ 7 ಗಂಟೆಯ ಒಳಗೆ, ತುಲಾ ಲಗ್ನ, ತುಲಾರಾಶಿಯಲ್ಲಿ ಕಾವೇರಿ ತಾಯಿಯು ದರ್ಶನ ನೀಡಬಹುದು. ತುಲಾ ಸಂಕ್ರಮಣದ ಕಾಲದಲ್ಲಿ ಮಳೆ ಬರುವುದು ಖಚಿತ. ಹುತ್ತರಿ ಹಬ್ಬವು 30.11.2020ರಂದು ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಆಗಬಹುದು. (ಅಂದು ಚಂದ್ರಗ್ರಹಣವಿದ್ದರೂ ಹುತ್ತರಿ ಆಚರಣೆಗೆ ಅಡ್ಡಿ ಇಲ್ಲ).