ಪೊನ್ನಂಪೇಟೆ: ಕಾಲೇಜು ಶಿಕ್ಷಣ ಪಡೆಯುವ ಸಮಯ ವಿದ್ಯಾರ್ಥಿ ಜೀವನದ ಸುವರ್ಣಘಟ್ಟ. ಮಾದಕ ವ್ಯಸನಕ್ಕೆ ಬಲಿಯಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ಕೆ.ಎನ್. ಸುರೇಶ್ ಬೋಪಣ್ಣ ಸಲಹೆ ನೀಡಿದರು.
ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು ಎನ್ಎಸ್ಎಸ್ ಘಟಕ ಹಾಗೂ ಗೋಣಿಕೊಪ್ಪಲು ಪೊಲೀಸ್ ಠಾಣೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾದಕ ವ್ಯಸನದಿಂದ ಯುವ ಜನತೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಗಳಲ್ಲಿ ಮೊದಮೊದಲು ಕುತೂಹಲಕ್ಕೆ ಪ್ರಾರಂಭವಾಗುವ ಮಾದಕ ವಸ್ತು ಸೇವನೆ ನಂತರ ಚಟವಾಗಿ ಪರಿಣಮಿಸಿ ಅವರ ಬದುಕನ್ನೇ ಸರ್ವನಾಶ ಮಾಡಿಬಿಡುತ್ತದೆ.
ಮಾದಕ ವ್ಯಸನಕ್ಕೆ ಒಳಗಾದವರ ನೆನಪಿನ ಶಕ್ತಿ ಕುಂಠಿತವಾಗುತ್ತದೆ. ಮಾನಸಿಕ ಕಿನ್ನತೆಗೆ ಒಳಗಾಗಿ ಉಸಿರಾಟದ ತೊಂದರೆ, ಹೃದಯ ಸಂಬಂಧಿ ಖಾಯಿಲೆ, ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಬದುಕು ಕಳೆದುಕೊಳ್ಳುತ್ತಾರೆ. ಈ ಚಟ ಯುವಜನತೆ ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತದೆ. ಮಾದಕ ವ್ಯಸನಕ್ಕೆ ದಾಸರಾದವರನ್ನು ಸಮಾಜ ಕೆಟ್ಟ ದೃಷ್ಟಿಯಿಂದ ನೋಡುತ್ತದೆ. ಸಂಬಂಧಿಕರು ಕೂಡ ಅವರಿಂದ ದೂರವಾಗುತ್ತಾರೆ. ಆದ್ದರಿಂದ ಇಂತಹ ದುಶ್ಚಟದಿಂದ ದೂರವಿರಿ ಎಂದು ಹೇಳಿದರು.
ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಮೇಲೆ ಅಪಾರ ನಂಬಿಕೆ ಇಟ್ಟು ಕಾಲೇಜಿಗೆ ಕಳುಹಿಸುತ್ತಾರೆ. ಯಾವುದೇ ರೀತಿಯ ಕೆಟ್ಟ ಚಟಕ್ಕೆ ಬಲಿಯಾಗದೇ ಉತ್ತಮ ವಿದ್ಯಾರ್ಥಿಯಾಗಿ ಹೆತ್ತವರಿಗೆ ಹೆಸರು ತರಬೇಕು ಎಂದರು. ಈ ಸಂದರ್ಭ ಎನ್ಎಸ್ಎಸ್ ಅಧಿಕಾರಿ ಎಸ್.ಆರ್. ತಿರುಮಲಯ್ಯ, ಉಪನ್ಯಾಸಕ ಚೇತನ್ ಚಿಣ್ಣಪ್ಪ, ಪೊಲೀಸ್ ಸಿಬಂದಿಗಳಾದ ಮಹೇಶ್ ಹಾಗೂ ಮಂಜು ಉಪಸ್ಥಿತರಿದ್ದರು.
ಸುಂಟಿಕೊಪ್ಪ: ಇಲ್ಲಿನ ಜೆಸಿಐ ಸಂಸ್ಥೆ ವತಿಯಿಂದ ಸೆಂಟ್ ಮೇರಿಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಬಗ್ಗೆ ತರಬೇತಿ ನೀಡಲಾಯಿತು.
ಮುಖ್ಯ ತರಬೇತುದಾರರಾಗಿ ಆಗಮಿಸಿದ ಲೆಕ್ಕಪರಿಶೋಧಕ ಸಿ.ಎ. ಫ್ರಾನ್ಸಿಸ್ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ವಿಧಾನ, ಓದುವ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ ನೀಡಿ ಮುಂದಿನ ಪರೀಕ್ಷೆ ಧೈರ್ಯವಾಗಿ ಎದುರಿಸಿ ಉತ್ತಮ ಫÀಲಿತಾಂಶ ಪಡೆಯುವಂತೆ ಕರೆ ನೀಡಿದರು.
ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ತುಂಬಾ ಅÀನುಕೂಲವಾಗಿದೆ. ಇನ್ನು ಮುಂದೆಯೂ ಇಂತಹ ತರಬೇತಿ ನೀಡಿ ಸಹಕಾರ ನೀಡುವಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಪ್ರಿಯಾಚಂದ್ರನ್, ಸದಸ್ಯರಾದ ಮುರುಗೇಶ್, ರಂಜಿತ್, ನಂದಕುಮಾರ್, ಡೆನ್ನೀಸ್, ಸತೀಶ್, ಫೆಲ್ಸ್ಸಿ ಡೆನ್ನೀಸ್, ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು.
ಮಡಿಕೇರಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಂಡನಕೊಲ್ಲಿಗೆ ಬೆಂಗಳೂರಿನ ಅವಿರತ ಪ್ರತಿಷ್ಠಾನ ಸಂಸ್ಥೆ ವತಿಯಿಂದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಾಗೂ ಅಲ್ಮೆರಾವನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಎಸ್. ಆನಂದ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.