ಸೋಮವಾರಪೇಟೆ, ಜ. 4: ತಾಲೂಕಿನ ಶಾಂತಳ್ಳಿಯಲ್ಲಿ ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಬಸ್ ಶೆಲ್ಟರ್ ಇದೀಗ ಶಿಥಿಲಾವಸ್ಥೆಗೆ ತಲಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ತಕ್ಷಣ ಇದನ್ನು ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀರಿನ ಟ್ಯಾಂಕ್ ನಿರ್ಮಿಸಬೇಕು. ಅಥವಾ ಶೆಲ್ಟರ್‍ನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಹಿಂದೆ ಪ್ರೇಮಾ ಕಾರ್ಯಪ್ಪ ಅವರು ರಾಜ್ಯ ಸಭಾ ಸದಸ್ಯರಾಗಿದ್ದ ಅವಧಿಯಲ್ಲಿ ಶಾಂತಳ್ಳಿಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಶೆಲ್ಟರ್ ನಿರ್ಮಿಸಲಾಗಿತ್ತು. ನಂತರದ ದಿನಗಳಲ್ಲಿ ನಿರ್ವಹಣೆಯ ಕೊರತೆಯಿಂದ ಶಿಥಿಲಾವಸ್ಥೆಗೆ ತಲಪಿದ್ದು, ಇದೀಗ ಮುರಿದು ಬೀಳುವ ಹಂತದಲ್ಲಿದೆ.

ಬಸ್ ಶೆಲ್ಟರ್‍ನ ಛಾವಣಿ ಈಗಾಗಲೇ ತುಕ್ಕು ಹಿಡಿದು ಕೆಳಗೆ ಬೀಳುತ್ತಿದ್ದು, ಹಾಗೆಯೇ ಬಿಟ್ಟರೆ ಮುಂದೊಂದು ದಿನ ಇಡೀ ಶೆಲ್ಟರ್ ಕೆಳಬಿದ್ದು, ಹೆಚ್ಚಿನ ಅಪಾಯ ಸಂಭವಿಸಲಿದೆ. ಇದಕ್ಕೂ ಮುನ್ನ ಪಂಚಾಯಿತಿ ವತಿಯಿಂದ ಶೆಲ್ಟರ್ ಅನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಕ್ರಮ ವಹಿಸಬೇಕೆಂದು ಸ್ಥಳೀಯರಾದ ಲಿಂಗರಾಜು, ಸುಂದರ್, ನಿರಂಜನ್, ಗೋಪಾಲ್ ಸೇರಿದಂತೆ ಇತರರು ಅಭಿಪ್ರಾಯಿಸಿದ್ದಾರೆ.

ಶಿಥಿಲಾವಸ್ಥೆಯ ಶೆಲ್ಟರ್ ಪಕ್ಕದಲ್ಲಿಯೇ ವಿಎಸ್‍ಎಸ್‍ಎನ್ ಕಟ್ಟಡವಿದ್ದು, ಅದರ ಬಳಿಯಲ್ಲೇ ಮತ್ತೊಂದು ಬಸ್ ನಿಲ್ದಾಣವಿದೆ. ಇದೀಗ ತುಕ್ಕು ಹಿಡಿಯುತ್ತಿರುವ ಬಸ್ ಶೆಲ್ಟರ್‍ನಿಂದ ಯಾರಿಗೂ ಪ್ರಯೋಜನ ವಿಲ್ಲ. ಶೆಲ್ಟರ್‍ನ ಮೇಲ್ಛಾವಣಿ ತುಂಡಾಗಿ ಕೆಳಗೆ ಬೀಳುತ್ತಿದ್ದು, ಮಕ್ಕಳು ಇದರ ಬಳಿಯೇ ಆಟವಾಡುತ್ತಿರುತ್ತಾರೆ. ನಿಷ್ಪ್ರಯೋಜಕವಾಗಿರುವ ಈ ನಿಲ್ದಾಣವನ್ನು ತೆರವುಗೊಳಿಸುವದು ಅಥವಾ ದುರಸ್ತಿಗೊಳಿಸುವ ಕೆಲಸವನ್ನು ಪಂಚಾಯಿತಿ ತುರ್ತಾಗಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್, ಶಿಥಿಲಾವಸ್ಥೆ ಯಲ್ಲಿರುವ ಶೆಲ್ಟರ್‍ನ್ನು ದುರಸ್ತಿ ಗೊಳಿಸಲು ಪಂಚಾಯಿತಿಯಿಂದ ಕ್ರಮ ವಹಿಸಲಾಗಿದೆ. ಈಗಾಗಲೇ ರೂ. 50 ಸಾವಿರಕ್ಕೆ ಎಸ್ಟಿಮೇಟ್ ತಯಾರಿಸ ಲಾಗಿದ್ದು, ಸದ್ಯದಲ್ಲಿಯೇ ದುರಸ್ತಿ ಕಾರ್ಯ ನಡೆಯಲಿದೆ. ಈ ಶೆಲ್ಟರ್‍ನ ಸಮೀಪವೇ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗುವದು ಎಂದು ತಿಳಿಸಿದ್ದಾರೆ.