ಮಡಿಕೇರಿ, ಜ. 4: ಕಳೆದ ಎರಡು ವರ್ಷಗಳಿಂದ ಕಾವೇರಿನಾಡು ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಅನೇಕ ಕಷ್ಟ, ನಷ್ಟಗಳನ್ನು ಅನುಭವಿಸಿದೆ. 2020 ರಲ್ಲೂ ಇದು ಪುನರಾವರ್ತನೆಯಾಗಬಾರದು ಮತ್ತು ಮಳೆಗಾಲದಲ್ಲಿ ಯಾವುದೇ ಸಂಕಷ್ಟದ ಪರಿಸ್ಥಿತಿ ಎದುರಾಗಬಾರದು. ಇದಕ್ಕಾಗಿ ಜಿಲ್ಲೆಯ ಜನ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ, ತಾ. 14 ರಂದು ಮಕರ ಸಂಕ್ರಾಂತಿಯ ದಿನ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಕೃತಿಯ ಆರಾಧನೆಯ ಮತ್ತು ಸೂರ್ಯ ಪಥ ಬದಲಾವಣೆಯ ಮಕರ ಸಂಕ್ರಾಂತಿ ಕಾಲದಲ್ಲಿ ಜಿಲ್ಲೆಯ ಪ್ರತಿ ಊರು ಹಾಗೂ ಗ್ರಾಮಗಳಲ್ಲಿನ ದೇವಾಲಯಗಳಲ್ಲಿ ಎಲ್ಲರೂ ಒಗ್ಗೂಡಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಲದಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಪ್ರಾರ್ಥನೆ ಸಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ ಮತ್ತಿತರ ಹಿಂದೂ ಪರ ಸಂಘಟನೆಗಳೊಂದಿಗೆ ತಾ. 14 ರಂದು ಕೊಡಗಿನ ಮಳೆ ದೇವರ ನೆಲೆಯಾದ ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯಕ್ಕೆ ತೆರಳಿ ಜಿಲ್ಲೆಯ ಜನರ ಪರವಾಗಿ ತಾವೂ ಕೂಡ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
2018 ಮತ್ತು 19 ರಲ್ಲಿ ಕೊಡಗು ಜಿಲ್ಲೆ ಮಹಾಮಳೆಯ ಹೊಡೆತಕ್ಕೆ ಸಿಲುಕಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿತು. ಕಳೆದ ವರ್ಷ 21 ಕ್ಕೂ ಹೆಚ್ಚು ಮಂದಿ ಮೃತಪಟ್ಟರು, ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡವು. ರೈತರು ಹಾಗೂ ಬೆಳೆಗಾರರು ಎಲ್ಲವನ್ನೂ ಕಳೆದುಕೊಂಡು ಆರ್ಥಿಕ ಸಂಕಷ್ಟದಿಂದ ಶೂನ್ಯಕ್ಕೆ ತಲಪಿದರು. ಪ್ರವಾಸೋದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿರುವ ಮಂದಿ ನಷ್ಟವನ್ನು ಅನುಭವಿಸಿದರು. ಕಳೆದ ಎರಡು ವರ್ಷಗಳ ಅತಿವೃಷ್ಟಿ ಹಾನಿಯಿಂದ ಚೇತರಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಜಿಲ್ಲೆ ಇರುವಾಗಲೇ ಮತ್ತೆ ಮಳೆಗಾಲ ಸಮೀಪಿಸುತ್ತಿದೆ. ಕೋಟ್ಯಾಂತರ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವ ಕಾವೇರಿಯ ತವರು ಜಿಲ್ಲೆ ಕೊಡಗಿನಲ್ಲಿ ಅನೇಕ ದೇವಾಲಯಗಳಿದ್ದು, ಇದೊಂದು ಪಾವಿತ್ರತೆಯ ಪುಣ್ಯ ಕ್ಷೇತ್ರವಾಗಿದೆ. ಪ್ರತಿವರ್ಷ ಅನಾಹುತಗಳು ಸಂಭವಿಸುತ್ತಿರುವುದರಿಂದ ಈ ಬಾರಿಯ ಮಳೆಗಾಲದಲ್ಲೂ ಪ್ರವಾಹ ಎದುರಾಗಬಹುದು ಎನ್ನುವ ಆತಂಕ ಜನರಲ್ಲಿದೆ. ಈ ಆತಂಕವನ್ನು ದೂರ ಮಾಡಲು ದೇವರ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ರವಿ ಕುಶಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.