ವೀರಾಜಪೇಟೆ, ಜ. 4: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನು ಬಾಳುಗೋಡುವಿನಲ್ಲಿ ವಿಲೇವಾರಿ ಮಾಡಲು ಮೂರು ಎಕರೆಗೂ ಅಧಿಕ ಜಾಗವನ್ನು ಗುರುತಿಸಿದ್ದು ಇದನ್ನು ಬಾಳುಗೋಡು ಗ್ರಾಮಸ್ಥರು ತೀವ್ರವಾಗಿ ವಿರೋಧಿಸುವುದಲ್ಲದೆ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥ ಮಾಚೇಟಿರ ಸಚಿನ್ ಮಂದಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳುಗೋಡು ಗ್ರಾಮದಲ್ಲಿ 350ಕ್ಕೂ ಅಧಿಕ ಮನೆಗಳಿದ್ದು ಏಕಲವ್ಯ ವಸತಿ ಶಾಲೆ ಮತ್ತು ಫೆಡರೇóಷನ್ ಆಫ್ ಕೊಡವ ಸಮಾಜ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸುತ್ತಿದೆ.

ಗ್ರಾಮದ ಒತ್ತಿನಲ್ಲಿರುವ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೀರಾಜಪೇಟೆ ಪಟ್ಟಣದ ಘನತ್ಯಾಜ್ಯ ವಸ್ತುಗಳ ಘಟಕ ಇದ್ದು ಹುಳ ಉಪ್ಪಟ ನೊಣಗಳು ಹಾಗೂ ಬೀದಿ ನಾಯಿಗಳ ಹಾವಳಿಯಿಂದ ಅಲ್ಲಿನ ಜನರಿಗೆ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ಕಸ ಸುರಿಯಲು ಉದ್ದೇಶಿಸಿದ ಸ್ಥಳದ ಅರ್ಧ ಕಿಲೋ ಮೀಟರ್ ದೂರದಲ್ಲಿ ಬ್ರಹ್ಮಗಿರಿ ರಕ್ಷಿತ ಅರಣ್ಯ ಪ್ರದೇಶವಿದ್ದು ಇದರಿಂದ ಕಾಡು ಪ್ರಾಣಿಗಳಿಗೂ ಉಪಟಳ ಉಂಟಾಗಲಿದೆ.

ಅಂತರ್ಜಲ ಹಾಗೂ ಕುಡಿಯುವ ನೀರಿನ ತೆರೆದ ಬಾವಿಗೂ ತೊಂದರೆಯಾಗಲಿದೆ. ಎಲ್ಲ ರೀತಿಯಿಂದಲೂ ಗ್ರಾಮಸ್ಥರಿಗೆ ತೊಂದರೆಯಾಗುವ ಈ ಗ್ರಾಮ ಪಂಚಾಯಿತಿಯ ಯೋಜನೆಯನ್ನು ಕೈಬಿಡದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು.

ಗೋಷ್ಠಿಯಲಿ ಗ್ರಾಮಸ್ಥರಾದ ಎ.ಸಿ. ಜಯರಾಜ್, ಕೆ.ಬಿ. ಮನೋಜ್, ಬಿ.ಎಸ್. ಲಿಖಿತ್, ಪಿ.ಎಸ್. ಮಂಜು ಉಪಸ್ಥಿತರಿದ್ದರು.