ಶನಿವಾರಸಂತೆ, ಜ. 4: ಸ್ಥಳೀಯ ಗ್ರಾ.ಪಂ. ಆಡಳಿತ ಮಂಡಳಿಯ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಾಮಾನ್ಯ ಸಭೆಯಲ್ಲಿ ಬಹುತೇಕ ವಾರ್ಡ್ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಯಾವದೇ ಕೆಲಸ ಕಾರ್ಯಗಳು ನಡೆಯದಿರುವ ಬಗ್ಗೆ ಅಧ್ಯಕ್ಷರು ಮತ್ತು ಗ್ರಾ.ಪಂ. ಅಧಿಕಾರಿಗಳ ಬಗ್ಗೆ ಅಸಮಾಧಾನ ಹೊರಹಾಕಿದರು.
ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಅಸಮರ್ಪಕ ಕಸವಿಲೇವಾರಿ, ರಸ್ತೆ, ಚರಂಡಿ ದುರಸ್ತಿ ಪಡಿಸದಿರುವುದು, ಬೀದಿ ದೀಪ ಅಳವಡಿಸದಿರುವುದು ಸೇರಿದಂತೆ ಉದ್ಯೋಗ ಖಾತರಿ ಯೋಜನೆಯಿಂದ ಈ ವಾರ್ಡ್ನಲ್ಲಿ ಯಾವದೇ ಕಾಮಗಾರಿ ನಡೆದಿಲ್ಲ ಎಂದು ಸದಸ್ಯ ಸರ್ದಾರ್ ಅಹಮ್ಮದ್ ಅಸಮಾಧಾನ ವ್ಯಕ್ತಿಪಡಿಸಿದರು.
ಸದಸ್ಯರಾದ ಎಸ್.ಎನ್. ಪಾಂಡು, ಎನ್.ಕೆ. ಆದಿತ್ಯ, ಉಷಾ ಜಯೇಶ್ ಅವರುಗಳು ಪಟ್ಟಣದ ಸಂತೆ ಮಾರುಕಟ್ಟೆಯನ್ನು ಸಹ ಅಭಿವೃದ್ಧಿಪಡಿಸಿಲ್ಲ ಎಂದು ಆರೋಪಿಸಿದರು. ಪಕ್ಕದ ಆದಾಯ ಇಲ್ಲದ ಗ್ರಾ.ಪಂ.ಗಳು ಅಭಿವೃದ್ಧಿಯಾಗುತ್ತಿದ್ದು, ನಮ್ಮ ಗ್ರಾ.ಪಂ.ಗೆ ಆದಾಯ ಇದ್ದರೂ ಸಹ ಇಚ್ಚಾಸಕ್ತಿಯ ಕೊರತೆಯಿಂದ ಪಟ್ಟಣವನ್ನು ಅಭಿವೃದ್ಧಿ ಪಡಿಸುತ್ತಿಲ್ಲ ಎಂದು ಸರ್ದಾರ್ ಅಹಮದ್, ಹೆಚ್.ಆರ್. ಹರೀಶ್ ಆರೋಪಿಸಿದರು. ಸರಕಾರದಿಂದ ನಮ್ಮ ಗ್ರಾ.ಪಂ.ಗೆ ಇಲ್ಲಿಯವರೆಗೆ ಬಡವರಿಗಾಗಿ ಯಾವದೇ ಯೋಜನೆಯಿಂದ ವಸತಿ ಸೌಲಭ್ಯ ಬಂದಿಲ್ಲ ಎಂದು ಸದಸ್ಯೆ ಹೇಮಾವತಿ ದೂರಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಹರೀಶ್, ಪಿಡಿಓ ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯ ಆಚಾರ್, ಲೆಕ್ಕಾಧಿಕಾರಿ ವಸಂತ್, ಫೌಜಿಯಾ ಬಾನು, ಸದಸ್ಯರು ಹಾಜರಿದ್ದರು.