ಕೂಡಿಗೆ, ಜ. 4: ಶಿರಂಗಾಲ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹೊಸ ವರ್ಷದ ಅಂಗವಾಗಿ ವಿದ್ಯಾರ್ಥಿಗಳು ದೇಶೀಯ ಉಡುಪುಗಳಾದ ಬಿಳಿ ಪಂಚೆ, ಬಿಳಿ ಅಂಗಿ ಹಾಗೂ ಸೀರೆ, ಲಂಗ, ದಾವನಿಗಳನ್ನು ತೊಟ್ಟು ಇಡೀ ಕಾಲೇಜಿನಲ್ಲಿ ಬಣ್ಣಬಣ್ಣದ ರಂಗನ್ನು ಹೆಚ್ಚಿಸಿದರು.

ದೇಶಿಯ ಉಡುಪುಗಳ ಧರಿಸುವಿಕೆ ಮಹತ್ವವನ್ನು ಕುರಿತು ನಡೆಸಿದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸೋಮಯ್ಯ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ದೇಶೀಯ ಉಡುಪುಗಳು ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ದೇಶೀಯ ಉಡುಪುಗಳನ್ನು ಧರಿಸಿ ಇಡೀ ಕಾಲೇಜಿನ ವಾತಾವರಣದ ಮೆರುಗನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ನಮ್ಮ ದೇಶದ ಉಡುಪುಗಳು ಅತ್ಯಂತ ಗಾಂಭೀರ್ಯವನ್ನು ತುಂಬುವ ಘನತೆಯನ್ನು ಹೆಚ್ಚಿಸುವ ಉಡುಪುಗಳಾಗಿವೆ. ಇವುಗಳನ್ನು ಬಿಟ್ಟು ಪಾಶ್ಚಿಮಾತ್ಯ ಉಡುಪುಗಳಿಗೆ ನಮ್ಮ ಯುವ ಜನತೆ ಬೆರಗಾಗುತ್ತಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹೊಸ ವರ್ಷದ ಅಂಗವಾಗಿ ದೇಶೀಯ ಉಡುಪುಗಳನ್ನು ಧರಿಸಿ ಅದರ ಮಹತ್ವವನ್ನು ನಮ್ಮ ಮೂಲಕ ಇಡೀ ಸಮಾಜಕ್ಕೆ ಗೊತ್ತು ಪಡಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತೆ ಶಿಬಿರದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಕೀರ್ತಿ ಎಂಬ ವಿದ್ಯಾರ್ಥಿಯನ್ನು ಪ್ರಶಂಸಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಬಗೆಬಗೆಯ ದೇಶೀಯ ಉಡುಪುಗಳನ್ನು ಧರಿಸಿ ಸಂತೋಷವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.