(ಕಳೆದಸಂಚಿಕೆಯಿಂದ)

‘‘ಅಣ್ಣ ಇದ್ಯಾಕಣ್ಣ ಇಷ್ಟು ಲೇಟು.. ಘಂಟೆ 9 ಆಯಿತು ಅಣ್ಣ, ಮನೆಯಲ್ಲಿ ಮಕ್ಕಳು ಕಾಯುತ್ತಿದ್ದಾರೆ. ಬೇಗ ಬನ್ನಿ ಅಣ್ಣ, ಹಬ್ಬ ಬೇರೆ’’ ಒಂದೇ ರಾಗದಲ್ಲಿ ಎಲ್ಲ ಹೇಳಿ ಮುಗಿಸುವಾಗ ಅದರಲ್ಲಿ ತಾಳ್ಮೆಯ ಉತ್ತುಂಗದ ಸ್ವರಗಳು ಪ್ರತಿಧ್ವನಿಸುತ್ತಿದ್ದವು. “ಬಂದೆ-ಬಂದೆ ಲಕ್ಷ್ಮೀ ಗಾಡಿ ಪಂಚರ್ ಆಗಿದೆ, ಅದಕ್ಕೆ ಒಂದೈದು ನಿಮಿಷ ಬಂದು ಬಿಟ್ಟೆ’’ ಮಾತು ಮುಗಿಸುವಷ್ಟರಲ್ಲಿ “ಪಂಚರ್-ಗಿಂಚರ್ ಏನು ಅಲ್ಲ ಕುಡಿದು ಗಾಡಿ ಓಡಿಸಿ.. ಸಾಹೇಬರು ಹಿಡಿದಿಟ್ಟಿದ್ದಾರೆ” ಒಂದೇ ಸಮನೆ ಉಸುರಿಬಿಟ್ಟ ಆ ಪೊಲೀಸ್ ಪೇದೆ. ಎಲಾ ಇವನಾ ಯಾವಾಗ ಪಕ್ಕ ಬಂದು ನಿಂತಿದ್ದ ಸದ್ಯಕ್ಕೆ ಕರೆ ಮಾಡಿರುವುದು ನನ್ನ ಮನೆಯ ಕೆಲಸದವಳು, ಮನೆಯವಳಾಗಿದ್ದರೆ. ಅಯ್ಯೋ ಶಿವನೇ ಈ ರೀತಿ ಸುಖಿ ಸಂಸಾರಕ್ಕೆ ಹುಳಿ ಹಿಂಡುತಾನಲ್ಲಾ, ಛೇ ಇವನಿಗೆ ಹೆಂಡತಿ, ಸಂಸಾರ ಇಲ್ಲವೇ ? ಪಿತ್ತ ನೆತ್ತಿಗೇರಿತ್ತಾದರೂ ‘ಬಡವನ ಕೋಪ ದವಡೆ ಮೂಲ’ ಎಂಬ ಗಾದೆ ಯಾರೋ ಕಿವಿಯಲ್ಲಿ ಹೇಳಿದಂತಾ ಯಿತು. ಕೋಪ ತೋರಿಸದೆ “ಸರ್ ಏನಾದರು ಮಾಡಿ ಪ್ಲೀಸ್” ನನ್ನ ದಯಾನೀಯ ಅವಸ್ಥೆಯ ಕಂಡು ಮರುಕ ಬಂದವನಂತೆ,. “ಹೇಗೋ ಸಾಹೇಬರಿಗೆ ಹೇಳಿ 3000 ರೂ. ಗೆ ಒಪ್ಪಿಸಿರುವೆ, ಕೊಟ್ಟು ಗಾಡಿ ತೆಗೆದುಕೊಂಡು ಹೋಗು, ಇಲ್ಲ ನಾಳೆ ಸ್ಟೇಷನ್ನಿಗೆ ಬಂದು 10 ಸಾವಿರ ಫೈನ್ ಕಟ್ಟಿ ಗಾಡಿ ಬಿಡಿಸಿಕೊ” ಎಂದು ಹೊರಟೇ ಬಿಟ್ಟ.

ನಾನು ಗಾಡಿಯಿಂದ ಇಳಿದು ಅವನ ಹಿಂದೆ “ಅಣ್ಣ, ಅಣ್ಣ ನಿಲ್ಲಿ ಒಂದು ನಿಮಿಷ ಪ್ಲೀಸ್” ಅಂತ ಗೋಗರೆದೆ ಅವನು ಕೇಳಿಸದಂತೆ ಪುನಃ ಠಾಣಾಧಿಕಾರಿಯ ಪಕ್ಕ ಹೋಗಿ ನಿಂತ.

‘‘ಅಣ್ಣ... ಅಣ್ಣ’’ ನಾನು ಕರೆದ ಅದೇ ಧ್ವನಿ ಪುನಃ ಕೇಳುವಂತೆ ಭಾಸವಾಯಿತು, ಇದೇನಿದು ಇಷ್ಟು ಸಮಯ ನಂತರ ಪ್ರತಿಧ್ವನಿಯೆ ಎಂದು ಸುತ್ತ-ಮುತ್ತ ನೋಡಿದೆ. ನನ್ನ ಅನಿಸಿಕೆಯಾಗಿರಬಹುದು ಏಕೆಂದರೆ ಮನಸ್ಸಿನ ಸಮತೋಲನ ತಪ್ಪಿದೆ. ಅಲ್ಲ ಅನಿಸಿಕೆಯಲ್ಲ ಪುನಃ ಅದೇ ಶಬ್ಬ ಕೇಳುತ್ತಿದೆ. ಮತ್ತೆ ಮನವರಿಕೆಯಾಯಿತು. ಛೆ.. ನನ್ನ ಮನೆ ಕೆಲಸದವಳು ಮಾಡಿದ ಕರೆ ಇನ್ನೂ ಚಾಲ್ತಿಯಲ್ಲಿದೆ. ಇಷ್ಟು ದಿನ ಅವಳ ಮುಂದೆ ಬಹಳ ಗಾಂಭೀರ್ಯದಿಂದ ವರ್ತಿಸಿದ ನನ್ನ ಎಲ್ಲ ಬಂಡವಾಳ ನುಚ್ಚು ನೂರಾಯಿತು. ಅವಳ ಮುಖ ಹೇಗೆ ನೋಡುವುದು. ಅದರ ಬಗ್ಗೆ ಮತ್ತೆ ಚಿಂತಿಸುವ, ಹೇಗಾದರೂ ಮಾಡಿ ಅವಳನ್ನು ಇನ್ನು ಸ್ವಲ್ಪ ಹೊತ್ತು ಕಾಯಲು ಹೇಳುವ. ಅಕ್ಕ ಕರೆ ಮಾಡಿದರೆ ಸ್ವಲ್ಪ ಹೊತ್ತು ಕರೆ ಸ್ವೀಕಾರ ಮಾಡಬೇಡ ಅಂತ ಹೇಳುವ ಎಂದು ತೀರ್ಮಾನಿಸಿ “ಹಲೋ ಲಕ್ಷ್ಮಿ ಬಂದೆ ಒಂದು ಹತ್ತು ನಿಮಿಷ” ಅನ್ನುವಷ್ಟರಲ್ಲಿ “ಏನಾಯಿತಣ್ಣಾ ಗಾಡಿ ಇಡಿದವ್ರಾ.. ಚಿಂತೆ ಬಿಡಿ ಅಣ್ಣಾ.. ಅಲ್ಲಿ ಯಾವ ಪೊಲೀಸು ಇದ್ದಾರೆ ಒಸಿ ಹೆಸರು ಹೇಳಿ” ಅಂದಳು. ಇವಳೇನು ಆಟ ಆಡುತಿದ್ದಳಾ, ನನ್ನ ಥರ ಇವಳಿಗೂ ತಲೆ ಕೆಟ್ಟೋಯಿತಾ, ಇಲ್ಲಿರುವ ಪೇದೆ, ಠಾಣಾಧಿಕಾರಿಗಳ ಹೆಸರು ಕೇಳಿ ಇವಳಿಗೇನು ಮಾಡಲು ಸಾಧ್ಯ ಸ್ವಲ್ಪ ಹೊತ್ತಿನಲ್ಲಿ ಹಲವಾರು ಪ್ರ್ರಶ್ನೆಗಳು ಒಮ್ಮೆಲೇ ನನ್ನ ಕಾಡಿತ್ತು. “ಅಣ್ಣಾ ಹಲೋ ಅಣ್ಣಾ’’ ಅವಳಾದರೋ ತ್ರಿವಿಕ್ರಮನಂತೆ. ತನ್ನ ಛಲ ಬಿಡದೆ ಕೇಳುತಲೇ ಇದ್ದಳು. ಮತ್ತೊಮ್ಮೆ ಅವಳಿಗೆ ನಾನು ಸಮಾಧಾನದಲ್ಲಿ ಮುಚ್ಚುಮರೆಯಿಲ್ಲದೆ ಹೇಳಿದೆ. ‘‘ಲಕ್ಷ್ಮಿ ಯಾರೋ ಹೊಸ ಪೊಲೀಸು ಸಾಹೇಬರು ಬಂದಿದ್ದಾರೆ, ಬಾರಿ ಶಿಸ್ತು, ಎಲ್ಲರನ್ನು ಹಿಡಿಯುತ್ತಿದ್ದಾರೆ ಪೊಲೀಸು, ಪೊಲೀಸು. ಮಾತು ಮುಗಿಸುವಷ್ಟರಲ್ಲಿ “ಹೇ ಪೊಲೀಸು ತಾನೇ ಬಿಡಿ ಅಣ್ಣಾ, ಮೊದಲು ಹೆಸರು ಹೇಳಿ” ಅಂದಾಗ ಪೊಲೀಸು ಅಂದರೆ ಬಹಳ ಸಲೀಸಾಗಿ ಹೇಳುತ್ತಿದ್ದಾಳಲ್ಲ. ನನ್ನ ಕ್ಷಮೆಯ ಗಡಿ ದಾಟಿದ್ದರೂ, ನದಿಗೆ ಬಿದ್ದಾಗ ಪ್ರಾಣ ರಕ್ಷಣೆಗೆ ಕೈಗೆ ಸಿಗುವ ಹುಲ್ಲಾದರೂ ಪರವಾಗಿಲ್ಲ. ಪ್ರಯತ್ನ ಪಡಬೇಕು ಎಂಬಂತೆ’’ ಸಾಹೇಬರ ಹೆಸರು ಗೊತ್ತಿಲ್ಲ ಜೊತೆಗಿರುವ ಪೇದೆಯ ಹೆಸರು ಗೊತ್ತಿದೆ” ಅಂದೇ. ಅಷ್ಟರಲ್ಲಿ ಅವಳು ‘‘ಸಾಕು-ಸಾಕು ಏನು ಹೆಸರು’’ ಏನು ತಡವಿಲ್ಲದೆ ಕೇಳಿದಳು. ಮತ್ತೆ ಯೋಚನೆ ಮಾಡಲಿಲ್ಲ “ಹರಿಶ್ಚಂದ್ರ’’ ಅಂದೇ ಅಷ್ಟೇ ಕರೆಯನ್ನು ಕಡಿತ ಗೊಳಿಸಿದಳು. ನನಗಾದರೋ ಹೆಸರು ಕೇಳಿದಕ್ಕೆ ಹೇಳಿಬಿಟ್ಟೆ ಇನ್ನು ಇವಳೇನು ಮಾಡುತ್ತಾಳಂತ ನೆನೆದು ನಡುಕ ಶುರುವಾಯಿತು. ಕಾಲುಗಳು ಪರಸ್ಪರ ತಾಗದಿರಲು ನನ್ನ ಕರಗಳನ್ನು ಕಾಲಿನ ಮದ್ಯದಲ್ಲಿಟ್ಟು ಮನೆ ದೇವರನ್ನು ಮನದಲ್ಲಿ ನೆನೆಯುತ್ತ ನಂಬಿಕೆ ಇಲ್ಲದಿದ್ದರೂ ಅವರಿಗೆ ಕರೆಯೇನಾದರೂ ಬರಬಹುದೇನೋ ಎಂದು ನನ್ನ ಕರ್ಣಗಳನ್ನು..ಬರುವ ರಿಂಗ್‍ಟೋನ್‍ಗಾಗಿ ಮೀಸಲಿಟ್ಟೆ. ‘‘ಹಲೋ ಹೇಳಿ ಪರಮೇಶ್’’ ಎದೆ ಡಗ್ಗ್ ಎಂದಿತು. ಪೇದೆಗೆ ಕರೆ ಬಂದಿದೆ. ರಿಂಗಾದ ಶಬ್ದ ಕೇಳಲೇ ಇಲ್ಲ. ಓ ಬಹುಶ: ಮೇಲಧಿಕಾರಿ ಇರುವಾಗ ವೈಬ್ರೆಟ್ಟಲ್ಲಿ ಇಟ್ಟಿರುತ್ತಾ ರೇನೋ.. ಏನೇ ಆಗಲಿ ಮೈನೆಲ್ಲಾ ಕಣ್ಣು, ಕಿವಿಯಾಗಿಸಿ.. ಅವನ ಮಾತುಗಳ ಆಳಿಸಿದೆ. “ಇದ್ದಾರೆ ಇದ್ದಾರೆ ಕೊಡುತೇನೆ.’’ ಅಂತ ಹೇಳಿ ಠಾಣಾಧಿಕಾರಿಗೆ ತನ್ನ ಮೊಬೈಲನ್ನು ತನ್ನ ಅಂಗಿಗೆ ಒರಸಿ ಕೊಟ್ಟ. ಅವರ ಮಾತು ಕೇಳದೆ ಅಸ್ಪಷ್ಟವಾಗಿತ್ತು 30 ಕ್ಷಣಗಳ ಸಂಭಾಷಣೆಯ ನಂತರ ಮೊಬೈಲನ್ನು ಪೇದೆಗೆ ಕೊಟ್ಟು, ಗಾಂಭೀರ್ಯವಾಗಿ ಅವನು ನನ್ನ ವಾಹನದ ಕಡೆಗೆ ನೋಡಿ ಪೇದೆಯ ಕಿವಿಗೆ ಏನೋ ಉಸುರಿದ. ನನ್ನ ಎದೆ ಬಡಿತ ನನ್ನ ಹತೋಟಿಯನ್ನು ಮೀರಿ ಹೊಡೆಯುತಿತ್ತು, ಕಣ್ಣು ಕಪ್ಪಾಗುವಂತೆ ಭಾಸವಾಗತೊಡಗಿತು, ಬರುವುದೆಲ್ಲಾ ಬರಲಿ ಎಂದು ತಲೆ ತಗ್ಗಿಸಿ ಗಟ್ಟಿ ಮನಸು ಮಾಡಿ ಕುಳಿತುಕೊಂಡೆ. “ತಗೋಳಿ ಸರ್ ನಿಮ್ಮ ಕೀ, ಇನ್ನೊಂದು ಸಲ ಸಿಕ್ಕಾಕೊಳ್ಳಬೇಡಿ, ಹೂಂ ಬೇಗ ಹೊರಡಿ, ಅಂತ ಬಹಳ ನಯವಾಗಿ ನಗು ಮುಖದ ಮುಖವಾಡದೊಂದಿಗೆ ಹೇಳಿ, ನನ್ನ ಉತ್ತರಕ್ಕೂ ನಿಲ್ಲದೆ ಹೊರಟೆ ಬಿಟ್ಟ. ನಾನು ಬೆಪ್ಪನಂತೆ ನನ್ನ ತೊಡೆಯನೊಮ್ಮೆ ಚಿವುಟಿ ನೋಡಿದೆ. ಹೌದು ಕನಸಲ್ಲ ನಿಜ ನನ್ನ ವಾಹನದ ಕೀಲಿ ಯಾವುದೇ ಹಣ ಕೊಡದೆ ಯಾವುದೇ ಶುಲ್ಕ ಪಾವತಿಸದೇ ನನ್ನ ಬಳಿ ಬಂದಿದೆ, ಮತ್ತೆ ತಡ ಮಾಡಲಿಲ್ಲ. ನಡುಗುವ ಕೈಯಲ್ಲಿ ಗಾಡಿ ಸ್ಟಾರ್ಟ್ ಮಾಡಿ ಹೊರಟೆ, ಮನೆಯ ಹೊಸ್ತಿಲಲ್ಲಿ ನನ್ನ ಬರುವಿಕೆಯನ್ನು ಕಾದು ಲಕ್ಷ್ಮಿ ನಿಂತಿದ್ದಾಳೆ. ಅವಳ ಮುಖದಲ್ಲಿ ವಿಜಯೋತ್ಸವದ ಮಂದಹಾಸ ಬೀರುತ್ತಿದೆ. ನನಗಾದರೋ ಮಾತಾನಾಡುವ ಹಕ್ಕಿಲ್ಲದೆ ಮೌನಿಯಾಗಿದ್ದೆ. ವಾಹನವನ್ನು ನಿಲ್ಲಸಿ ಇಳಿಯುವುದಕಿಂತ ಮೊದಲು ನನ್ನನ್ನೇ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ತಯಾರು ಮಾಡಿಕೊಂಡೆ. “ಸರಿ ಅಣ್ಣ, ಊಟ ತೆಗೆದು ಮೇಜಿನ ಮೇಲೆ ಇಟ್ಟಿರುವೆ” ನಾನು ಬರಲೇ. ಅಂತೆ ತಾನೇನು ಮಾಡಿಲ್ಲ ನಿಮಗಾಗಿ ಎನ್ನುವ ಭಾವನೆಯಲ್ಲಿ ಹೊರಟು ನಿಂತಿದ್ದ ಅವಳ ಕೈಯಲ್ಲಿ ಮೊದಲೇ ತೀರ್ಮಾನಿಸಿದಂತೆ 500 ರೂ.ಗಳನ್ನೂ ಕೊಡುತಾ ‘‘ಹಬ್ಬ ಅಲ್ವಾ ಮಕ್ಕಳಿಗೆ ಏನಾದರು ತೆಗೆದು ಕೊಂಡು ಹೋಗು’’ ಅಂತ ಹೇಳಿ. ‘‘ಅಕ್ಕನಿಗೆ ಹೇಳುವುದು ಬೇಡ’’ ಎಂದು ತಗ್ಗಿದ ಸ್ವರದಲ್ಲಿ ಹೇಳಿದೆ. ‘‘ಆಯಿತಣ್ಣ’’ ಎಂದು ಅವಳು ಹೊರಟಾಗ, ಕುತೂಹಲ ತಡೆಯಲಾಗದೆ “ನೀನು ಯಾರಿಗೆ ಕರೆ ಮಾಡಿದೆ ಲಕ್ಷ್ಮಿ” ಅಂತ ಕೇಳಿಯೇ ಬಿಟ್ಟೆ.

“ಅದಾ ಅಣ್ಣ ನಾನು ಬೆಳಿಗ್ಗೆ 6 ಘಂಟೆಯಿಂದ 11 ಘಂಟೆಯವರೆಗೆ ಇಲ್ಲಿನ ಸರ್ಕಲ್ ಇನ್ಸ್‍ಪೆಕ್ಟರ್ ಮನೆಯಲ್ಲಿ ಕೆಲಸಕ್ಕೆ ಹೋಗುತೇನೆ. ನಿಮ್ಮ ಗಾಡಿ ಹಿಡಿದು ನೀವು ಬರುವುದು ಲೇಟಾದರೆ ನಾನು ಬೆಳಿಗ್ಗೆ ಲೇಟಾಗಿ ಬರಬೇಕಾಗುತ್ತದೆ ಅಂತ ಅವರ ಹೆಂಡತಿಗೆ ಕರೆ ಮಾಡಿ ಹೇಳಿದೆ ಅಷ್ಟೇ. ಬಾಕಿ ಅಮ್ಮಾವರು ನೋಡ್ಕೊಂಡ್ರು ಅಂತ ಗೇಟ್ ಮುಚ್ಚಿ, ‘‘ಬರುತೀನಿ ಅಣ್ಣ’’ ಅಂತ ಹೊರಟೆ ಬಿಟ್ಟಳು, ಬಾಗಿಲಿಗೆ ಚಿಲಕ ಹಾಕಿ ನಾನು ಸೋಫಾ ದಲ್ಲಿ ಕುಕ್ಕರಿಸಿದೆ. 500ರೂ. ಸಿಕ್ಕಿದ ಖುಷಿ ಅವಳಿಗಾದರೆ 2500 ಬಾಕಿಯಾದ ಸಂತೋಷದಿಂದ ಮೈಮರೆಯುತ್ತಿದ್ದ ನನ್ನನ್ನು ಧಾರಾವಾಹಿಯ ವೃತ ಮುಗಿಸಿದ ನನ್ನವಳ ಕರೆ ಎಚ್ಚರಿಸಿತು.

?ಟೋಮಿ ಥೋಮಸ್,

(ನಾ ಕನ್ನಡಿಗ) ಸಿದ್ದಾಪುರ.