ಕೂಡಿಗೆ, ಜ. 4: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿಯಲ್ಲಿ ವಿಶೇಷ ಗ್ರಾಮಸಭೆಯು ಕೂಡಿಗೆ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯ ಪರಿಚಯ ಮತ್ತು ನೀತಿಯ ಕುರಿತು ವಿವರವಾಗಿ ತಿಳಿಸಲಾಯಿತು. ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವ ಬಗ್ಗೆ, ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಅವಶ್ಯಕತೆ ಹಾಗೂ ಆ ಸಮಿತಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿಕೊಂಡು ಹೋಗುವ ಕುರಿತು ಚರ್ಚೆಗಳು ನಡೆದವು. ಗ್ರಾಮಸ್ಥರು ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯನ್ನು ರಚಿಸಿಕೊಳ್ಳಲು ಹಾಗೂ ಗ್ರಾಮ ನೀರು ಸರಬರಾಜು ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಸರ್ವಾನುಮತದಿಂದ ತೀರ್ಮಾನಿಸಿದರು.
ಗ್ರಾಮ ಪಂಚಾಯಿತಿ ಸ್ವಸಹಾಯ ಸಂಘಗಳ, ಸರ್ಕಾರೇತರ ಸಂಸ್ಥೆಗಳ, ನಾಗರಿಕ ಸಮಾಜ ಸಂಸ್ಥೆಗಳ ಹಾಗೂ ಆಶಾ ಕಾರ್ಯಕರ್ತೆಯರ ಜವಾಬ್ದಾರಿಗಳ ಬಗ್ಗೆ ಹಾಗೂ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆಯ ಕಾರ್ಯವೈಖರಿ ಹಾಗೂ ಜವಾಬ್ದಾರಿಗಳ ಬಗ್ಗೆ ಚರ್ಚೆಗಳು ನಡೆದವು.
ಸಾಮಾಜಿಕ ಮತ್ತು ಪರಿಸರ ನೈರ್ಮಲ್ಯ ಸುಸ್ಥಿರತೆ, ನೀರಿನ ಗುಣಮಟ್ಟ ಪರೀಕ್ಷೆ, ಮೇಲುಸ್ತುವಾರಿ ಮತ್ತು ಜವಾಬ್ದಾರಿಗಳು ಸೇರಿದಂತೆ ಪರಿಸರ ನೈರ್ಮಲ್ಯ ಮತ್ತು ಶುಚಿತ್ವ ಹಾಗೂ ಸ್ವಚ್ಛ ಭಾರತ ಸಪ್ತಾಹ ಆಚರಣೆಯ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಜಿಲ್ಲಾ ಸಂಯೋಜಕ ಚೇತನ್ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಶಿಲ್ಪ, ಸ್ವಸಹಾಯ ಗುಂಪುಗಳ ಸದಸ್ಯರು, ಈ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಗ್ರಾ.ಪಂ. ವ್ಯಾಪ್ತಿಯ ನೀರುಗಂಟಿಗಳು, ಪೌರಕಾರ್ಮಿಕರು ಸಭೆಯಲ್ಲಿ ಹಾಜರಿದ್ದರು.