ಮಡಿಕೇರಿ, ಜ. 2: ದಾವಣೆಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದ ರಸ್ತೆ ಅಪಘಾತವೊಂದರಲ್ಲಿ ಜಿಲ್ಲೆಯ ಮಾಜಿ ಯೋಧ ಹಾಗೂ ಯುವ ಉದ್ಯಮಿಯೋರ್ವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಕಾರು ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ್ದು; ಕುಟ್ಟಂದಿ ಗ್ರಾಮದವರಾಗಿದ್ದ ಮಾಜಿ ಯೋಧ ಅಮ್ಮೆಕಂಡ ದರ್ಶನ್ (38) ಎಂಬವರು ಸ್ಥಳದಲ್ಲೇ ಅಸುನೀಗಿದ್ದಾರೆ. ಇವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಸ್ನೇಹಿತ ಮಾಪಣಮಾಡ ಕಾರ್ಯಪ್ಪ ಎಂಬವರು ಗಾಯಗೊಂಡಿದ್ದು; ಅವರನ್ನು ಚಿಕಿತ್ಸೆಗಾಗಿ ಚನ್ನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಮ್ಮೆಕಂಡ ದರ್ಶನ್ ಅವರು ಸೇನೆಯಲ್ಲಿ ಹದಿನೈದು ವರ್ಷ ಸೇವೆ ಸಲ್ಲಿಸಿದ್ದು; ನಿವೃತ್ತಿ ಪಡೆದ ಬಳಿಕ ವೀರಾಜಪೇಟೆಯಲ್ಲಿ ಶೌರ್ಯ ಸೆಕ್ಯುರಿಟಿ ಏಜೆನ್ಸಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು; ಈ ಉದ್ದಿಮೆ ನಡೆಸುತ್ತಿದ್ದರು. ಹಲವಷ್ಟು ಮಂದಿಗೆ ಇವರು ಉದ್ಯೋಗವಕಾಶವನ್ನು ಕಲ್ಪಿಸಿದ್ದರು. ಕೊಡಗು ಸೇರಿದಂತೆ ಇತರೆಡೆಗಳಿಗೂ ಇವರು ಸೆಕ್ಯುರಿಟಿಗಳನ್ನು ಒದಗಿಸುತ್ತಿದ್ದರು. ಇದರಂತೆ ನಿನ್ನೆ ರಾತ್ರಿ 8 ಗಂಟೆಗೆ ವೀರಾಜಪೇಟೆಯಿಂದ ಈ ಕರ್ತವ್ಯದ ನಿಮಿತ್ತ ಹೊಸಪೇಟೆಗೆಂದು ತಮ್ಮ ಐಟ್ವೆಂಟಿ ಕಾರಿನಲ್ಲಿ (ಕೆ.ಎ. 12 ಎಂ.ಎ. 3986) ಸ್ನೇಹಿತರಾದ ಮಾಪಣಮಾಡ ಕಾರ್ಯಪ್ಪ ಅವರೊಂದಿಗೆ ತೆರಳುತ್ತಿದ್ದರೆನ್ನಲಾಗಿದೆ.(ಮೊದಲ ಪುಟದಿಂದ) ಇಂದು ಮುಂಜಾನೆ ದಾವಣಗೆರೆಯ ಚನ್ನಪಟ್ಟಣ ಠಾಣಾ ವ್ಯಾಪ್ತಿಯ ಹೆದ್ದಾರಿಯಲ್ಲಿ ರಸ್ತೆಗಡ್ಡ ಬಂದ ಎಮ್ಮೆಯೊಂದಕ್ಕೆ ಕಾರು ಡಿಕ್ಕಿಯಾಗುವದನ್ನು ತಪ್ಪಿಸಲು ಯತ್ನಿಸಿದ ಸಂದರ್ಭ ಕಾರು ಅಚಾನಕ್ ಆಗಿ ಎದುರಿನಿಂದ ಬಂದ ಲಾರಿಯೊಂದಕ್ಕೆ ಅಪ್ಪಳಿಸಿದ್ದಾಗಿ ತಿಳಿದು ಬಂದಿದೆ. ಘಟನೆಯಿಂದ ಅಶ್ವಥ್ ಸ್ಥಳದಲ್ಲೇ ಸಾವನ್ನಪ್ಪಿದ್ದು; ಕಾರ್ಯಪ್ಪ ಅವರಿಗೆ ಪೆಟ್ಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕೆಲಗಂಟೆಗಳ ಮುಂಚೆ ಇವರು ಕುಟ್ಟಂದಿಯಲ್ಲಿದ್ದ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರೆನ್ನಲಾಗಿದೆ.
ಅಶ್ವಥ್ ಅವರ ತಂದೆ ಡಾಲಿ ಸುಬ್ಬಯ್ಯ ಅವರು ಕೂಡ ಮಾಜಿ ಸೈನಿಕರಾಗಿದ್ದಾರೆ. ಅಶ್ವಥ್ ಅವರು ಸೇನೆಯಿಂದ ನಿವೃತ್ತರಾದರೂ ಉತ್ತಮ ವ್ಯಕ್ತಿತ್ವದೊಂದಿಗೆ ಕ್ರಿಯಾಶೀಲರಾಗಿ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದುದಾಗಿ ಅವರ ನೆರೆಮನೆಯವರಾದ ಕೋಲತಂಡ ರಘು ಮಾಚಯ್ಯ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಮೃತ ಅಶ್ವಥ್ ಪತ್ನಿ ಅರ್ಚನಾ ಹಾಗೂ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಘಟನೆ ಅರಿತ ಬಳಿಕ ಕುಟುಂಬ ವರ್ಗ ದಾವಣಗೆರೆಗೆ ತೆರಳಿದ್ದು; ಮೃತದೇಹವನ್ನು ಕುಟ್ಟಂದಿಗೆ ತರಲಾಯಿತು.