ಸಿದ್ದಾಪುರ, ಜ. 2: ಎಸ್.ಎನ್.ಡಿ.ಪಿ. ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಎಲ್ಲ ಗ್ರಾಮಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗುವುದೆಂದು ಎಸ್.ಎನ್.ಡಿ.ಪಿ. ಯೂನಿಯನ್‍ನ ನೂತನ ಅಧ್ಯಕ್ಷ ವಿ.ಕೆ. ಲೋಕೇಶ್ ಹೇಳಿದರು. ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಈಗಾಗಲೇ ಕೊಡಗು, ದ.ಕನ್ನಡ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 46 ಶಾಖೆಗಳನ್ನು ಹೊಂದಿಕೊಂಡಿದ್ದು, ಮುಂದಿನ ದಿನಗಳಲ್ಲಿ ಎಸ್.ಎನ್.ಡಿ.ಪಿ. ಶಾಖೆಗಳನ್ನು ಎಲ್ಲಾ ಗ್ರಾಮಗಳಲ್ಲಿ ಪ್ರಾರಂಭಿಸುವ ಮೂಲಕ ನೂರರ ಗಡಿಯನ್ನು ಮೀರಿಸಲಾಗುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಸದಸ್ಯರುಗಳ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರ ಸಹಕಾರವು ಅತ್ಯಗತ್ಯ ಎಂದರು. ಹಿರಿಯರ ಪರಿಶ್ರಮದಿಂದ ಪ್ರಾರಂಭಗೊಂಡ ಸಂಘಟನೆಯನ್ನು ಸದಸ್ಯರ ಸಹಕಾರದೊಂದಿಗೆ ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸುವ ಮೂಲಕ (ಮೊದಲ ಪುಟದಿಂದ) ಆದಾಯವನ್ನು ಹೆಚ್ಚಿಸಲಾಗುವುದೆಂದು ತಿಳಿಸಿದರು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಂಘಟನೆಗೆ ಸದಸ್ಯರು ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು. ನಾರಾಯಣ ಗುರುಗಳ ತತ್ವ, ಸಿದ್ದಾಂತ, ಸಂದೇಶ ಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.

ಎಸ್.ಎನ್.ಡಿ.ಪಿ. ಯೂನಿಯನ್‍ನ ಮಾಜಿ ಕಾರ್ಯದರ್ಶಿ ಎಂ.ವಿ. ಸಜೀವನ್ ಮಾತನಾಡಿ ಎಸ್.ಎನ್.ಡಿ.ಪಿ. ಯೋಗಂನಲ್ಲಿ 140 ಯೂನಿಯನ್‍ಗಳಿದ್ದು ಈ ಪೈಕಿ ಕೊಡಗು, ಶಿವಮೊಗ್ಗ, ದ.ಕನ್ನಡ ಜಿಲ್ಲೆ ಸೇರಿದಂತೆ ಜಿಲ್ಲೆಯ ಯೂನಿಯನ್ ಉತ್ತಮ ಯೂನಿಯನ್ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟನೆಯಲ್ಲಿ ವ್ಯಕ್ತಿ ಮುಖ್ಯವಲ್ಲ ಸಂಘಟನೆ ಮುಖ್ಯವೆಂದು ತಿಳಿಸಿದರು.

ಟಿ.ಕೆ. ಸಾಯಿಕುಮಾರ್ ಮಾತನಾಡಿ, ಸಮಾಜ ಬಾಂಧವರ ಮುಂದಿನ ಮಕ್ಕಳ ಭವಿಷ್ಯದ ಹಿನ್ನೆಲೆಯಲ್ಲಿ ಸಂಘಟನೆಯು ಅಗತ್ಯವಾಗಿದೆ ಎಂದರು. ಸಂಘಟನೆ ಯಲ್ಲಿ ತ್ಯಾಗ ಮನೋಭಾವನೆ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಧರ್ ಮಾಸ್ಟರ್ ಶ್ರೀ ನಾರಾಯಣ ಗುರುಗಳ ತತ್ವ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಆಡಳಿತ ಮಂಡಳಿಯು ಎಲ್ಲಾ ಶಾಖೆಗಳ ಸದಸ್ಯರುಗಳ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮಾದರಿ ಸಂಘಟನೆಯಾಗಬೇಕೆಂದು ಸಲಹೆ ನೀಡಿದರು.

ಕೆ.ಎಂ. ಶಶಿಧರ್ ಮಾತನಾಡಿ ನೂತನ ಆಡಳಿತ ಮಂಡಳಿಯು ಹಿರಿಯರ ಮಾರ್ಗದರ್ಶನ ಪಡೆದು ಸದಸ್ಯರುಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ತಿಳಿಸಿದರು.

ಹಿಂದೂ ಮಲಯಾಳಿ ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ಸಮಾಜ ಬಾಂಧವರು ಸಮಸ್ಯೆಗೆ ಸಿಲುಕುವ ಸಂದರ್ಭದಲ್ಲಿ ಸಂಘಟನೆಯ ಸಮಸ್ಯೆಗೆ ಸ್ಪಂದಿಸಬೇಕೆಂದು ತಿಳಿಸಿದರು.

ಸುಬ್ರಮಣಿ ಮಾತನಾಡಿ ನೂತನ ಆಡಳಿತ ಮಂಡಳಿಯು ಜವಬ್ದಾರಿ ಯಿಂದ ಉತ್ತಮ ಸೇವೆಯನ್ನು ಸದಸ್ಯರುಗಳಿಗೆ ನೀಡಬೇಕೆಂದರು. ಅಲ್ಲದೇ ಲೆಕ್ಕಾಚಾರಗಳನ್ನು ಪಾರದರ್ಶಕವಾಗಿ ಇಡಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಆಡಳಿತ ಮಂಡಳಿಗೆ ಆಯ್ಕೆಯಾದ ಅಧ್ಯಕ್ಷರಾದ ವಿ.ಕೆ. ಲೋಕೇಶ್, ಉಪಾಧ್ಯಕ್ಷ ಆರ್. ರಾಜನ್, ಕಾರ್ಯದರ್ಶಿ ಎಂ.ಪಿ.ಶಿವಪ್ರಸಾದ್, ಯೋಗಂ ನಿರ್ದೇಶಕ ಎಂ.ಎಂ. ಶಂಕರನಾರಾಯಣ, ಮೋಹನ್‍ದಾಸ್, ಪಂಚಾಯಿತಿ ಪ್ರತಿನಿಧಿಗಳಾದ ಟಿ.ಸಿ. ನಾರಾಯಣ, ದಾಮೋದರ, ಸಿ.ವಿ. ನಾರಾಯಣ ಇವರುಗಳಿಗೆ ಎಸ್.ಎನ್.ಡಿ.ಪಿ. ಯೂನಿಯನ್‍ನ ಮಾಜಿ ಉಪಾಧ್ಯಕ್ಷ ರಾಜೇಂದ್ರ ಬಾಬು ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಈ.ಎನ್. ಭರತ್ ಕುಮಾರ್ ಹಾಗೂ ಪದ್ಮನಾಭ ಮಾತನಾಡಿ ಸಲಹೆಗಳನ್ನು ನೀಡಿದರು. ಯೂನಿಯನ್‍ನ ಉಪಾಧ್ಯಕ್ಷ ಆರ್. ರಾಜನ್ ಸ್ವಾಗತಿಸಿ, ವಾಣಿ ಸುರೇಶ್ ವಂದಿಸಿದರು.