ಸೋಮವಾರಪೇಟೆ, ಜ.3: ಸಮೀಪದ ಐಗೂರು ಗ್ರಾಮ ಪಂಚಾಯಿತಿಯ ಸದಸ್ಯ ಕೆ.ಪಿ. ದಿನೇಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿ.ಪಿ. ಶಶಿಧರ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್ 26ರಂದು ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು, ದಿನೇಶ್ ಅವರ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಈವರೆಗೆ ಆರೋಪಿಗಳ ವಿರುದ್ಧ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಗ್ರಾ.ಪಂ. ಸದಸ್ಯರಾಗಿರುವ ದಿನೇಶ್ ಅವರು ರಾಜಕೀಯ ರಹಿತವಾಗಿ ಸಾರ್ವಜನಿಕ ಸೇವೆ ಮಾಡುತ್ತಿದ್ದು, ಇದನ್ನು ಸಹಿಸದ ಬಿಜೆಪಿ ಪಕ್ಷದವರು ದೌರ್ಜನ್ಯದ ಮೂಲಕ ಬೆದರಿಸಲು ಯತ್ನಿಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತಿದ್ದು, ಇಂತಹ ದಬ್ಬಾಳಿಕೆಗಳ ವಿರುದ್ಧ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.
ಈ ಹಿಂದೆ ಸೀತಾರಾಂ ಅವರು ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಐಗೂರಿನಲ್ಲಿ ದಿನೇಶ್ ಅವರ ಶ್ರಮದಿಂದ ಹಲವಷ್ಟು ಕಾಮಗಾರಿಗಳು ನಡೆದಿವೆ. 2017-18ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿಶೇಷ ಪ್ಯಾಕೇಜ್ ಮೂಲಕ ಕಾಮಗಾರಿಗಳಿಗೆ ಟೆಂಡರ್ ಆಗಿದೆ. ಇದರಲ್ಲಿ ಐಗೂರು-ಯಡವಾರೆ ರಸ್ತೆಗೆ 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರು, ಉದ್ದೇಶಿತ ರಸ್ತೆಯನ್ನು ಬಿಟ್ಟು ಬೇರೆಡೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದನ್ನು ಪ್ರಶ್ನಿಸಿದ ದಿನೇಶ್ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವದು ಖಂಡನೀಯ ಎಂದರು.
ಶಾಸಕರ ಅನುದಾನದ ಕಾಮಗಾರಿಯಾಗಿದ್ದರೆ ತಮ್ಮಿಷ್ಟದಂತೆ ಭೂಮಿ ಪೂಜೆ ನೆರವೇರಿಸಲಿ; ಆದರೆ ವಿಶೇಷ ಪ್ಯಾಕೇಜ್ನ ಕಾಮಗಾರಿ ಯನ್ನು ತಮ್ಮಿಷ್ಟದಂತೆ ಬದಲಾವಣೆ ಮಾಡಿರುವದು ಸರಿಯಲ್ಲ ಎಂದು ಶಶಿಧರ್ ಹೇಳಿದರು.
ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಬೆಳ್ಳಿಯಪ್ಪ ಸೇರಿದಂತೆ ಇತರರ ವಿರುದ್ಧ ಈವರೆಗೆ ಕ್ರಮ ಕೈಗೊಂಡಿಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಆಗಿರುವ ರಸ್ತೆ ಕಾಮಗಾರಿ ನಡೆಸಬೇಕು. ತಪ್ಪಿದ್ದಲ್ಲಿ ಪಕ್ಷ ಸೇರಿದಂತೆ ಇತರ ಸಂಘಟನೆಗಳ ಆಶ್ರಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಶಶಿಧರ್ ಎಚ್ಚರಿಸಿದರು.
ಗೋಷ್ಠಿಯಲ್ಲಿದ್ದ ಐಗೂರಿನ ಮಚ್ಚಂಡ ಅಶೋಕ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಹಾಗೂ ಗ್ರಾ.ಪಂ. ಸದಸ್ಯನ ಮೇಲೆ ಹಲ್ಲೆ ನಡೆದಿದ್ದರೂ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರುಗಳು ಯಾವದೇ ಸ್ಪಂದನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್ಸಿ ಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಬಿ.ಈ. ಜಯೇಂದ್ರ, ಡಿಸಿಸಿ ಉಪಾಧ್ಯಕ್ಷ ಕೆ.ಎ. ಆದಂ, ಪ್ರಮುಖರಾದ ನಾಗರಾಜ್, ದಾಮೋಧರ್ ಅವರುಗಳು ಉಪಸ್ಥಿತರಿದ್ದರು.