ಸೋಮವಾರಪೇಟೆ, ಜ. 2: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ತಾಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಸಿ.ಐ.ಟಿ.ಯು. ರಾಜ್ಯ ಸಮಿತಿ ವತಿಯಿಂದ ಶಾಲಾ ಪೂರ್ವ ಶಿಕ್ಷಣ ಅಂಗನವಾಡಿಗಳಲ್ಲಿ ಉಳಿಸುವಂತೆ ಆಗ್ರಹಿಸಿ ತಾ. 10 ರಂದು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ಬಡ ತಾಯಂದಿರ ಸಂವಿಧಾನಾತ್ಮಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಮುಂದಾಗದೇ ಬೆಂಗಳೂರು ನಗರ ಪ್ರವೇಶಿಸದಂತೆ ನಿಷೇಧಾಜ್ಞೆ ಹೇರಿರುವದು ಖಂಡನೀಯ ಎಂದು ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಸಮುದಾಯದ ಅಂಗನವಾಡಿ ಗಳನ್ನು ರಕ್ಷಿಸಬೇಕು, 2019 ಮೇ 17 ರಂದು ಹೊರಡಿಸಿರುವ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹಿಂಪಡೆಯಬೇಕು. ಉತ್ತಮ ಗುಣಮಟ್ಟದ ಉಚಿತ ಶಾಲಾ ಪೂರ್ವ ಶಿಕ್ಷಣವನ್ನು ಅಂಗನವಾಡಿಯಲ್ಲೇ ಪ್ರಾರಂಭಿಸಿ, ತಜ್ಞರ ಸಲಹೆ ಮೇರೆಗೆ ಸಮವಸ್ತ್ರ ಮತ್ತು ಪಠ್ಯದ ಕ್ರಮ ನಿಗದಿ ಮಾಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

ಮಕ್ಕಳ ಮತ್ತು ತಾಯಂದಿರ ಆಹಾರ, ಆರೋಗ್ಯ, ಶಿಕ್ಷಣದ ಹಕ್ಕು ರಕ್ಷಿಸಬೇಕು. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯ ಅವೈಜ್ಞಾನಿಕ ಅಂಶ ವಾಪಾಸ್ಸು ಪಡೆಯಬೇಕು. ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನವನ್ನು ಮತ್ತೊಮ್ಮೆ ನೀಡಬೇಕು. ರೂ. 21 ಸಾವಿರ ಕನಿಷ್ಟ ಕೂಲಿ ನೀಡಬೇಕು. ಸೇವಾಜ್ಯೇಷ್ಠತೆ ಒದಗಿಸಿ ಕೆಲಸ ಖಾಯಂ ಗೊಳಿಸಬೇಕು ಎಂದು ಒತ್ತಾಯಿಸುವ ಮನವಿಯನ್ನು ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭ ಸಂಘದ ತಾಲೂಕು ಸಮಿತಿ ಅಧ್ಯಕ್ಷೆ ಎಸ್.ಎನ್. ಸಾವಿತ್ರಿ, ಕಾರ್ಯದರ್ಶಿ ಎಂ.ವಿ. ಭಾಗೀರತಿ, ಖಜಾಂಚಿ ಎಂ.ಬಿ. ಜಮುನ, ಪದಾಧಿಕಾರಿಗಳಾದ ಜಯಮ್ಮ, ಕಾಂತಮಣಿ, ಸಿ.ಐ.ಟಿ.ಯು.ನ ಜಿಲ್ಲಾ ಉಪಾಧ್ಯಕ್ಷ ಪಿ.ಆರ್. ಭರತ್ ಇತರರು ಉಪಸ್ಥಿತರಿದ್ದರು.