ಮಡಿಕೇರಿ, ಜ. 3: ಮಡಿಕೇರಿಯು ಕೊಡಗು ಜಿಲ್ಲಾ ಕೇಂದ್ರ ಸ್ಥಳವಾಗಿದ್ದು, ನಿತ್ಯ ಸಾರ್ವಜನಿಕರ ಸಹಿತ ಪ್ರವಾಸಿಗರು ಬಂದು ಹೋಗುತ್ತಿದ್ದರೂ ಯಾವದೇ ಸೂಕ್ತ ಸಂಚಾರ ವ್ಯವಸ್ಥೆಯೊಂದಿಗೆ ವಾಹನಗಳ ನಿಲುಗಡೆಗೂ ಸ್ಥಳ ದೊರಕದಾಗಿದೆ. ಇನ್ನೊಂದೆಡೆ ಹಳೆಯ ಬಸ್ ನಿಲ್ದಾಣದಿಂದ ಶಾಲಾ - ಕಾಲೇಜು, ಓಂಕಾರೇಶ್ವರ ದೇವಾಲಯ, ಗೌಡ ಸಮಾಜ, ಒಳಾಂಗಣ ಕ್ರೀಡಾಂಗಣ ಮುಂತಾದೆಡೆ ತೆರಳಲು ಕಿಷ್ಕಿಂದೆ ರಸ್ತೆಯಿಂದ ನಿರಂತರ ಸಮಸ್ಯೆಯಾಗಿದೆ.
ನಗರದ ಸುದರ್ಶನ ವೃತ್ತದಿಂದ ಮಾರ್ಗದ ಇಕ್ಕಡೆಗಳಲ್ಲಿ ಫುಟ್‍ಪಾತ್, ಮಹದೇವಪೇಟೆ, ಕಾಲೇಜು ರಸ್ತೆ, ಗಣಪತಿ ಬೀದಿ, ಪೆನ್‍ಷನ್‍ಲೇನ್, ಗೌಳಿಬೀದಿ, ರಾಜಾಸೀಟ್ ಮಾರ್ಗ ಎಲ್ಲೆಡೆ ಕಿಷ್ಕಿಂದೆಯ ಸನ್ನಿವೇಶವೇ ಗೋಚರಿಸಲಿದೆ.
ಹೀಗಾಗಿ ಶಾಲಾ ರಸ್ತೆಯನ್ನು ಗೌಡ ಸಮಾಜದ ತನಕ ಹಾಗೂ ಮುಂದುವರಿದು ಓಂಕಾರೇಶ್ವರ ದೇವಾಲಯ ತನಕ ಅಗಲೀಕರಣ ಗೊಳಿಸಿದರೆ, ಸಾಕಷ್ಟು ವಾಹನ ದಟ್ಟಣೆ ನಿವಾರಿಸಿ; ಪಾದಚಾರಿಗಳು ಶಾಲಾ, ಕಾಲೇಜು ಮಕ್ಕಳಿಗೂ; ಪ್ರವಾಸಿಗರಿಗೂ ಅನುಕೂಲವಾದೀತು ಎಂದು ನಾಗರಿಕ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ಈ ದಿಸೆಯಲ್ಲಿ ಶಾಸಕರು ಹಾಗೂ ನಗರಸಭೆ ಗಮನಹರಿಸಿ; ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಸಂದರ್ಭ ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸುವ ಮುಖಾಂತರ ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸುವಂತೆಯೂ ‘ಶಕ್ತಿ’ಗೆ ನೀಡಿರುವ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.
ಕಾಲೇಜು ಹೇಗೆ : ಅಲ್ಲದೆ ಗೌಡ ಸಮಾಜದ ಎರಡು ಕಟ್ಟಡಗಳಲ್ಲಿ ವರ್ಷಪೂರ್ತಿ ಮದುವೆ ಇತ್ಯಾದಿ ಕಾರ್ಯಕ್ರಮಗಳ ಗದ್ದಲ ನಡುವೆ ಪಕ್ಕದಲ್ಲೇ ಮಹಿಳಾ ಕಾಲೇಜು ಸ್ಥಾಪಿಸಿದರೆ ವಿದ್ಯಾರ್ಥಿನಿಯರ ದೈನಂದಿನ ಪಠ್ಯ ಕ್ರಮಗಳ ಬಗ್ಗೆ ಸಮಸ್ಯೆ ಎದುರಾಗದೆ? ಎಂದು ಪ್ರಶ್ನಿಸಿದ್ದು, ಮಹಿಳಾ ಕಾಲೇಜಿಗೆ ಬೇರೆಡೆ ಮತ್ತಷ್ಟು ಉತ್ತಮ ನಿವೇಶನ ಕಲ್ಪಿಸಲು ಸಲಹೆ ನೀಡಿದ್ದಾರೆ.