ಸಿದ್ದಾಪುರ, ಜ. 3: ಸಿದ್ದಾಪುರದಿಂದ ಕುಶಾಲನಗರ ಮಾರ್ಗವಾಗಿ ಗೂಡ್ಸ್ ಜೀಪಿನಲ್ಲಿ ಅಕ್ರಮವಾಗಿ ಬೀಟೆ ನಾಟಾಗಳನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಯೋರ್ವನನ್ನು ಬಂಧಿಸುವಲ್ಲಿ ಮೀನುಕೊಲ್ಲಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಳೆದ ಒಂದು ವಾರಗಳ ಹಿಂದೆ ಸಿದ್ದಾಪುರ ಭಾಗದಿಂದ ಗೂಡ್ಸ್ ಜೀಪಿನಲ್ಲಿ (ಕೆಎ 18 ಬಿ 9888) ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ತುಂಬಿಸಿಕೊಂಡು ಕುಶಾಲನಗರದತ್ತ ಬೆಳಗ್ಗಿನ ಜಾವ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಕುಶಾಲನಗರ ಮೀನುಕೊಲ್ಲಿ ವ್ಯಾಪ್ತಿಯ ಅರಣ್ಯ ಸಿಬ್ಬಂದಿಗಳು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಮರ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂಬಾಲಿಸಿ ಬೆನ್ನಟ್ಟಿ ಸೆರೆಹಿಡಿಯಲು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ನಂಜರಾಯಪಟ್ಟಣ ಗ್ರಾಮದ ದುಬಾರೆ ಬಳಿ ಜೀಪು ಚಾಲಕ ತನ್ನ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿ ದುಬಾರೆ ಗದ್ದೆಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಅರಣ್ಯ ಸಿಬ್ಬಂದಿಗಳು ಜೀಪು ಹಾಗೂ 1.50 ಲಕ್ಷ ಮರ ಹಾಗೂ ಒಟ್ಟು 6 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ನಂತರ ತನಿಖೆ ನಡೆಸಿದ ಸಂದರ್ಭ ಹುಣಸೂರು ಹೊಸಪೆಂಚಹಳ್ಳಿ ನಿವಾಸಿ ಚೇತನ್ ಕುಮಾರ್ (26) ಎಂಬಾತನನ್ನು ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಗಳಾಗಿರುವ ವಾಲ್ನೂರು-ತ್ಯಾಗತ್ತೂರು ಗ್ರಾಮದ ನಿವಾಸಿ ಇಬ್ರಾಹಿಂ ಹಾಗೂ ಹುಣಸೂರು ತಾಲೂಕಿನ ಸೋಮನಳ್ಳಿ ನಿವಾಸಿ ಉದಯ ಇವರ ಪತ್ತೆಗೆ ಅರಣ್ಯ ಇಲಾಖಾ ಅಧಿಕಾರಿಗಳು ಬಲೆ ಬೀಸಿದ್ದಾರೆ. ಪ್ರಮುಖ ಆರೋಪಿ ವಾಲ್ನೂರು-ತ್ಯಾಗತ್ತೂರು ನಿವಾಸಿ ಇಬ್ರಾಹಿಂ ಈ ಹಿಂದೆ ಹಲವಾರು ಬೀಟೆ ಮರಗಳ ಕಳವು ಪ್ರಕರಣದಲ್ಲಿ ಆರೋಪಿ ಆಗಿದ್ದು ನ್ಯಾಯಾಲಯ ದಿಂದ ಇತ್ತೀಚೆಗಷ್ಟೇ ಬಿಡುಗಡೆ ಗೊಂಡಿದ್ದ. ಇದೀಗ ಮತ್ತೆ ಮರ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದಾನೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಡಿ.ಎಫ್.ಓ. ಪ್ರಭಾಕರ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಎ.ಸಿ.ಎಫ್. ನೆಹರೂ, ವಲಯಾರಣ್ಯಾಧಿಕಾರಿ ಅನನ್ಯ ಕುಮಾರ್ ನೇತೃತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ಸುಬ್ರಾಯ, ಅರಣ್ಯ ರಕ್ಷಕ ಚರಣ್ಕುಮಾರ್, ಸಿಬ್ಬಂದಿಗಳಾದ ಅಲ್ಬರ್ಟ್ ಡಿಸೋಜ, ಚಾಲಕ ವಾಸು ಪಾಲ್ಗೊಂಡಿದ್ದರು.