ಕುಶಾಲನಗರ, ಜ. 2: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ದಿಷ್ಟ ಮಾನದಂಡ ಪಾಲಿಸದೆ ನಿರ್ಮಾಣಗೊಂಡಿರುವ ಖಾಸಗಿ ಬಡಾವಣೆಗಳಿಗೆ ಪಂಚಾಯಿತಿ ಅನುದಾನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು ಎಂದು ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ಆಗ್ರಹಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಹಲವು ಬಡಾವಣೆಗಳು ನಿರ್ಮಾಣಗೊಂಡಿವೆ. ರಸ್ತೆ, ಚರಂಡಿ, ಬೀದಿ ದೀಪಗಳು ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಅಳವಡಿಸದೆ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಪಂಚಾಯಿತಿ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದು ಸಮಂಜಸವಲ್ಲ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕ್ರಮವನ್ನು ಆಕ್ಷೇಪಿಸಿದರು.

ಪಂಚಾಯಿತಿ ವ್ಯಾಪ್ತಿಯ ಬೈಚನಹಳ್ಳಿ 1ನೇ ವಿಭಾಗದ ಯೋಗಾನಂದ ಬಡಾವಣೆ, ಭವಾನಿ ಲೇಔಟ್, ಚಂದ್ರಶೇಖರ್ ಲೇಔಟ್‍ಗಳ ಮಾಲೀಕರು ಬಡಾವಣೆಗಳನ್ನು ನಿರ್ಮಾಣ ಮಾಡುವ ಮುನ್ನ ಯೋಜನಾ ಪ್ರಾಧಿಕಾರ ಪ್ರಕಾರ ರಸ್ತೆ, ಚರಂಡಿ, ಬೀದಿ ದೀಪ, ಪಾರ್ಕ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾಗಿತ್ತು. ಪಾರ್ಕ್ ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಸಿಎ ಸೈಟ್ ಮೀಸಲಿರಿಸಿದ ಉಳಿದ ನಿವೇಶನಗಳನ್ನು ಮಾರಾಟ ಮಾಡಬೇಕು. ಆದರೆ ಈ ಬಡಾವಣೆಗಳ ಮಾಲೀಕರು ಯೋಜನಾ ಪ್ರಾಧಿಕಾರ ಅನುಮತಿಯನ್ನು ಪಡೆಯದೇ ಕೇವಲ ನಕ್ಷೆಯನ್ನು ಸಿದ್ದಪಡಿಸಿ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಬಡಾವಣೆಗಳಾಗಿ ಭೂ ಪರಿವರ್ತನೆ ಸಂದರ್ಭ ಶೇ. 40 ರಷ್ಟು ಜಾಗವನ್ನು ಮೂಲಭೂತ ಸೌಕರ್ಯ ಕಲ್ಪಿಸಲು ಮೀಸಲಿಡಬೇಕು ಎಂಬ ನಿಯಮ ಇದೆ. ಆದರೆ ಈ ಸರ್ಕಾರಿ ನಿಯಮವನ್ನು ಉಲ್ಲಂಘಿಸಿ ನಿರ್ಮಾಣಗೊಂಡಿರುವ ಬಡಾವಣೆಗಳಿಗೆ ಪಂಚಾಯಿತಿ ಅನುದಾನ ಬಳಕೆ ಮಾಡುವುದು ಕಾನೂನು ಬಾಹಿರವಾಗಿದೆ. ಈ ಭಾಗದ ಪ.ಪಂ. ಸದಸ್ಯೆ ರೇಣುಕಾ ಅವರು ಬಡಾವಣೆಗಳ ಮಾಲೀಕರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸುವ ಬದಲು ರಾಜಕೀಯ ಲಾಭಕ್ಕಾಗಿ ಸರಕಾರಿ ಅನುದಾನದಲ್ಲಿ ಖಾಸಗಿ ಬಡಾವಣೆಗಳ ವಿವಿಧ ಕಾಮಗಾರಿಯನ್ನು ಕೈಗೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದರು. ಚುನಾಯಿತ ಸದಸ್ಯರು ಕೂಡ ಇಂತಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಖಾಸಗಿ ಬಡಾವಣೆಗಳ ವಿರುದ್ಧ ಪ.ಪಂ. ಮುಖ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರ ನೀಡಲಾಗಿದೆ. ಈ ಬಡಾವಣೆಗಳ ವಿರುದ್ಧ ಪ್ರಕರಣ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿದೆ. ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿರುವ ಬಡಾವಣೆಗಳಿಗೆ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಬಾರದು. ಒಂದು ಪಕ್ಷ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಪ.ಪಂ. ಅಧಿಕಾರಿಗಳು ಈ ಬಡಾವಣೆಯಲ್ಲಿ ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಅಶೋಕ್ ಎಚ್ಚರಿಕೆ ನೀಡಿದ್ದಾರೆ.