ಗೋಣಿಕೊಪ್ಪ ವರದಿ, ಡಿ. 31: ಮರಗಳ್ಳತನ ಆರೋಪ ಎದುರಿಸುತ್ತಿರುವ ದಕ್ಷಿಣ ಕೊಡಗಿನ ಕಳ್ಳಿಚಂಡ ನೋಬನ್ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಸಾಕ್ಷಿದಾರನ ತನಿಖೆಗೆ ಅಡ್ಡಿ ಹಾಗೂ ಬೆದರಿಕೆ ಅರೋಪದಡಿ ದೂರು ದಾಖಲಾಗಿದೆ.ಕುಮಟೂರು ಗ್ರಾಮದ ಕೆ. ಎನ್. ಮಾದಪ್ಪ ಎಂಬುವವರು ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 342, 504, 506ರನ್ವಯ ನೋಬನ್ ವಿರುದ್ಧ ದೂರು ದಾಖಲಾಗಿದೆ.ವಿವರ: ಇತ್ತೀಚೆಗೆ ಮರಕಳ್ಳತನ, ಮಾರಾಟ, ಸಾಗಾಟ ಆರೋಪದಡಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟಿದ್ದ ನೋಬನ್ ವಿರುದ್ಧ ಕೆ.ಎನ್. ಮಾದಪ್ಪ ಸರ್ಕಾರಿ ಸಾಕ್ಷಿದಾರನಾಗಿ ಕಾರ್ಯ ನಿರ್ವಹಿಸಿದ್ದರು. ಇದರಂತೆ ತಿತಿಮತಿ ಪ್ರಾದೇಶಿಕ ಅರಣ್ಯ ಇಲಾಖೆ ಸೂಚನೆಯಂತೆ, ಪೊನ್ನಂಪೇಟೆ ವಲಯ ಉಪ ವಲಯ ಅರಣ್ಯಾಧಿಕಾರಿ ಉಮಾಶಂಕರ್ ಅವರೊಂದಿಗೆ ಡಿ. 21 ರಂದು ಹರಿಶ್ಚಂದ್ರಪುರದಲ್ಲಿರುವ ಪಲ್ಲೇರಿ ಟಿಂಬರ್ಸ್ ಮಳಿಗೆಗೆ ತನಿಖೆಗೆ ತೆರಳಿದ್ದರು.ಈ ಸಂದರ್ಭ ಅಧಿಕಾರಿ ಹಾಗೂ ಮಾದಪ್ಪ ಅವರನ್ನು ಮಳಿಗೆಯಲ್ಲಿ ಕೂಡಿ ಹಾಕಿ ಬೆದರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ‘ನನಗೆ ಬೇಕಾದವರು ಇದ್ದಾರೆ. ನಿನಗೆ ಪಾಠ ಕಲಿಸಲು ಗೊತ್ತು’ ಎಂದು ಹೆದರಿಸಿದ್ದಾರೆÉ ಎನ್ನುವ ಆರೋಪ ವ್ಯಕ್ತವಾಗಿದೆ. ನಿಂದನೆ ಮಾಡಿದ್ದು, ಕಾನೂನು ಕ್ರಮಕೈಗೊಳ್ಳಲು ಮಾದಪ್ಪ ಮನವಿ ಮಾಡಿದ್ದಾರೆ.

ಇದರಂತೆ ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ತಿಳಿಸಿದ್ದಾರೆ.