ಮಡಿಕೇರಿ, ಡಿ. 31: ವೈದ್ಯ ಪದ್ಧತಿಯಲ್ಲಿ ಅಲೋಪತಿ, ಹೋಮಿಯೋಪತಿ ಚಿಕಿತ್ಸೆಗಿಂತ ಆಯುರ್ವೇದ ಹೆಚ್ಚು ಪರಿಣಾಮಕಾರಿ ಯಾಗಿದ್ದು; ಯಾವುದೇ ದುಷ್ಪರಿಣಾಮ ಗಳನ್ನು ತಂದೊಡ್ಡಿ ರುವುದಿಲ್ಲ ಹೀಗಾಗಿ ಈ ವೈದ್ಯ ಪದ್ಧತಿಯ ಬಗ್ಗೆ ಗ್ರಾಮೀಣ ಹಾಗೂ ಆದಿವಾಸಿ ಜನತೆಯಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯ ಇದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಿ.ವಿ. ಸ್ನೇಹಾ ಕರೆ ನೀಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆಯ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣವನ್ನು ಮಹದೇವಪೇಟೆಯ ಆಯುಷ್ ಆಸ್ಪತ್ರೆಯ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿಗೆ ವಿಶ್ವದೆಲ್ಲೆಡೆ ಮಹತ್ವವಿದ್ದು; ಈ ಸಂಬಂಧ ಜನತೆಗೆ ಹೆಚ್ಚಿನ ತಿಳುವಳಿಕೆ ದೊರೆಯಬೇಕೆಂದು ಡಾ. ಸ್ನೇಹಾ ಅಭಿಪ್ರಾಯಪಟ್ಟರು.
ಆಯುಷ್ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ. ರಾಮಚಂದ್ರ ಮಾತನಾಡಿ; ಬಹುತೇಕ ಕಾಯಿಲೆಗಳಿಗೆ ಆಯುರ್ವೇದ ಔಷಧಿಗಳಿಂದ ಪರಿಹಾರವಿದ್ದು ಜನತೆಯಲ್ಲಿ ಅರಿವು ಮೂಡಿಸಬೇಕಿದೆ ಎಂದು ನೆನಪಿಸಿದರು. ಆ ದಿಸೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿ ಸಮೂಹದಿಂದ ವ್ಯಾಪಕ ಪ್ರಚಾರದ ಉದ್ದೇಶದಿಂದ ಈ ವಿಚಾರ ಸಂಕಿರಣ ಏರ್ಪಡಿಸಿರುವದಾಗಿ ಸಲಹೆ ನೀಡಿದರು. ಮನುಷ್ಯ ತನ್ನ ಜೀರ್ಣ ಶಕ್ತಿಗೆ ಅನುಸಾರವಾಗಿ ಆಹಾರ ಸೇವನೆಯಿಂದ ರೋಗ ಮುಕ್ತನಾಗಿ ಬದುಕು ನಡೆಸುವುದು ಸಾಧ್ಯವೆಂದು ನೆನಪಿಸಿದರು. ವೈದ್ಯರಾದ ಡಾ. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು. ಡಾ. ಶುಭಾ ಪ್ರಾರ್ಥನೆಯೊಂದಿಗೆ; ಡಾ. ಈಶ್ವರಿ ವಂದಿಸಿದರು.