ವೀರಾಜಪೇಟೆ, ಡಿ. 31 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ದರ್ಶನ್(33) ಎಂಬಾತನು ಇಂದು ಬೆಳಿಗ್ಗೆ 10ಗಂಟೆ ಸಮಯದಲ್ಲಿ ಆಸ್ಪತ್ರೆಯ ಮುಂಭಾಗದಲ್ಲಿ ಚಿಕಿತ್ಸೆಗಾಗಿ ರೋಗಿಗಳಿಗೆ ಚೀಟಿ ನೀಡುವ ಸ್ಥಳದಲ್ಲಿದ್ದ ಕ್ಲಾರಾ ಹಾಗೂ ಆರತಿ ಎಂಬಿಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದನೆಂದೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ನಗರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ದರ್ಶನ್ ಬೆಳಿಗ್ಗೆ ಚಿಕಿತ್ಸೆಗೆ ಚೀಟಿ ಬರೆಯುವ ಸ್ಥಳಕ್ಕೆ ಬಂದಾಗ ಅಲ್ಲಿಯೇ ಇದ್ದ ನಾನ್ ಕ್ಲಿನಿಕಲ್ ಸಿಬ್ಬಂದಿ ಉಷಾ ಹಾಗೂ ಲಕ್ಷ್ಮಿದೇವಿ ಮೇಲೆ ಹಲ್ಲೆ ನಡೆಸಿದಲ್ಲದೆ ಆಕೆ ತೊಟ್ಟಿದ್ದ ಬಳೆಗಳನ್ನು ಪುಡಿಗೈದಿದ್ದು ಕೈಯನ್ನು ಹಿಡಿದು ತಿರುಚುತ್ತಿದ್ದಾಗ ಇದನ್ನು ತಡೆಯಲು ಬಂದ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಸುರೇಶ್ ಎಂಬವರ ಕುತ್ತಿಗೆಗೂ ಹಗ್ಗದಿಂದ ಬಿಗಿದು ಕೊಲೆಗೆ ಯತ್ನಿಸಿದ್ದಾನೆ. (ಮೊದಲ ಪುಟದಿಂದ) ಇದರಿಂದ ತಪ್ಪಿಸಿಕೊಳ್ಳಲೆತ್ನಿಸಿದ ಸುರೇಶ್‍ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದನೆಂದೂ ಪೊಲೀಸರಿಗೆ ದೂರು ನೀಡಲಾಗಿದೆ. ಹಲ್ಲೆಗೊಳಗಾದ ಸುರೇಶ್ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು ಇತರ ಇಬ್ಬರು ಮಹಿಳೆಯರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಆರೋಪಿ ದರ್ಶನ್ ಇಲ್ಲಿನ ಬಿಟ್ಟಂಗಾಲದ ಬಳಿಯ ನಾಂಗಾಲ ಗ್ರಾಮದ ನಿವಾಸಿಯಾಗಿದ್ದಾನೆಂದು ತನಿಖೆಯಿಂದ ಗೊತ್ತಾಗಿದೆ. ಸುರೇಶ್‍ನ ರಕ್ಷಣೆಗೆ ತಕ್ಷಣ ದಂತ ವೈದ್ಯರಾದ ಡಾ: ಅನಿಲ್‍ಧವನ್ ಹಾಗೂ ಇತರ ಸಿಬ್ಬಂದಿಗಳು ಬಾರದಿದ್ದರೆ ಪ್ರಾಣಕ್ಕೆ ಸಂಚಕಾರವಾಗುತ್ತಿತ್ತೆಂದೂ ಆಸ್ಪತ್ರೆ ಕಚೇರಿಯ ಹಿರಿಯ ಸಿಬ್ಬಂದಿ ಎಚ್.ಬಿ.ನಿಶಾಂತ್ ಮಾದ್ಯಮದವರಿಗೆ ತಿಳಿಸಿದರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಿಂದ ರಾಜ್ಯ ಸರಕಾರ 2008ರಲ್ಲಿ ಜಾರಿಗೆ ತಂದಿರುವ ವೈದ್ಯೋಪಚಾರ ಶಾಸನದಂತೆ ಆಸ್ಪತ್ರೆಯಲ್ಲಿ ವೈದ್ಯರು, ಭದ್ರತಾ ಸಿಬ್ಬಂದಿ, ಇತರ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ, ಭದ್ರತಾ ಸಿಬ್ಬಂದಿ ಮೇಲೆ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಯತ್ನ, ಸಿಬ್ಬಂದಿಗಳ ಮೇಲೆ ಹಲ್ಲೆ ಆರೋಪದಂತೆ ನಗರ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ದಂತ ಪ್ರಕರಣವನ್ನು ನೇರವಾಗಿ ವೀಕ್ಷಿಸಿದ ಡಾ. ಅನಿಲ್‍ಧವನ್ ತಿಳಿಸಿದರು.