ಸೋಮವಾರಪೇಟೆ, ಡಿ. 31: ಕಳೆದ ತಾ. 17.12.2019ರಂದು ಗರ್ವಾಲೆ ಗ್ರಾಮದ ಮೇದುರ ಹೊಳೆ ಬಳಿಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಹೇಳಲಾಗಿದೆ.ಹಾಸನದ ಆಲೂರು ತಾಲೂಕು, ರಾಜನಹಳ್ಳಿ ನಿವಾಸಿ ಮುಲುವೆರ ಪಿ.ಗಣಪತಿ ಅವರ ಪುತ್ರ ಶರತ್‍ಕಾವೇರಪ್ಪ (28) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದವರು. ಕಳೆದ 17.12.2019ರಂದು ತಾಲೂಕಿನ ಹಾಲೇರಿ ಗ್ರಾಮದಲ್ಲಿರುವ ಕಾಫಿ ತೋಟಕ್ಕೆ ಆಗಮಿಸಿದ್ದ ಶರತ್, ತನ್ನ ದೊಡ್ಡಪ್ಪನ ಮಗ ಸೂರ್ಲಬ್ಬಿಯ ಬಿದ್ದಪ್ಪ ಅವರ ಮಾರುತಿ ಓಮ್ನಿ ಕಾರಿನಲ್ಲಿ
(ಮೊದಲ ಪುಟದಿಂದ) ಸೂರ್ಲಬ್ಬಿ ಗ್ರಾಮಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭ ಗರ್ವಾಲೆ ಗ್ರಾಮದ ಮೇದುರ ಹೊಳೆ ಸಮೀಪ ಬೈಕಿಗೆ ಡಿಕ್ಕಿಪಡಿಸಿದ್ದಾರೆ ಎನ್ನಲಾಗಿದೆ. ಈ ಅಪಘಾತದ ನಂತರ ಶರತ್ ಅವರು ಸ್ಥಳದಿಂದ ತೆರಳಿದ್ದು, ನಿನ್ನೆಯವರೆಗೂ ಪತ್ತೆಯಾಗಿರಲಿಲ್ಲ. ನಿನ್ನೆ ದಿನ ಶರತ್ ಅವರ ತಂದೆ ಪಿ. ಗಣಪತಿ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವ್ಯಕ್ತಿ ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಇಂದು ಬೆಳಗ್ಗೆ ಗರ್ವಾಲೆ ಗ್ರಾಮದ ದೇವಾಲಯದ ಬಳಿಯಲ್ಲಿ ಮರದ ಕೊಂಬೆಗೆ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಸ್ಥಿತಿಯಲ್ಲಿ ಶರತ್ ಅವರ ಮೃತದೇಹ ಕಂಡುಬಂದಿದೆ. ಕಳೆದ ತಾ. 17ರಂದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದ್ದು, ದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿದೆ. ತಾ. 17ರಂದು ನಡೆದ ಅವಘಡದ ನಂತರ ಸ್ಥಳದಿಂದ ತೆರಳಿದ್ದ ಶರತ್, ಗರ್ವಾಲೆ ಗ್ರಾಮದ ಮನೆಯೊಂದರಿಂದ ಹಗ್ಗ ಪಡೆದಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.