ಇತ್ತೀಚೆಗೆ ಕಾರಿನಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದೆ. ದಾರಿಯಲ್ಲಿ ಪತ್ನಿ ಮೊಬೈಲ್ ವಿಡಿಯೋ ನೋಡಿ ಗಾಬರಿಗೊಂಡಳು. ನೀನೂ ಇರುವ ಸಾರ್ವಜನಿಕ ಕೇಂದ್ರವೊಂದರಲ್ಲಿ ಹುಡುಗನೊಬ್ಬ ಹಣ ತೆಗೆಯುತ್ತಿದ್ದಾಗ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದಳು. ಕಾರು ನಿಲ್ಲಿಸಿ ವಿಡಿಯೋ ನೋಡಿದೆ. ಪ್ರಕರಣ ಹೌದಾದರೂ ಹುಡುಗ ಯಾರೆಂದು ಗೊತ್ತಾಗಲಿಲ್ಲ.ಈ ಬಗ್ಗೆ ವಿಚಾರಿಸಿದಾಗ ಮಡಿಕೇರಿಯ ನಿವಾಸಿ ಎಂದು ತಿಳಿಯಿತು. ಸ್ನೇಹಿತರೆಲ್ಲಾ ಆತನ ಮನೆಗೆ ಹೋದಾಗ ತಂದೆ ಇರಲಿಲ್ಲ; ಅಲ್ಲಿದ್ದವರಿಗೆ ವಿಷಯ ತಿಳಿಸಿದೆವು.ಎರಡು ದಿನಗಳ ನಂತರ ಫೋನಾಯಿಸಿದ ವ್ಯಕ್ತಿ, ತನ್ನ ಮಗ ತಪ್ಪು ಮಾಡಿದ್ದು, ನನ್ನಲ್ಲಿಗೆ ಕರೆದುಕೊಂಡು ಬರುವುದಾಗಿ ಹೇಳಿದರು. ದಿನ ನಿಗದಿ ಮಾಡಿ ಸ್ನೇಹಿತರೆಲ್ಲಾ ಒಂದೆಡೆ ಸೇರಿದೆವು.ಹುಡುಗನನ್ನು ಕರೆದುಕೊಂಡು ತಂಡವೇ ಬಂದಿತ್ತು! ತಂದೆ ಮಾತ್ರ ಇರಲಿಲ್ಲ!! ಹುಡುಗನ ವಯಸ್ಸು 18 ತುಂಬಿದೆ; ವಾರದ ಹಿಂದಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಅವಮಾನಗೊಂಡು ತಂದೆ ಬಾರಲು ಹಿಂದೇಟು ಹಾಕಿದ್ದರು. ಉಳಿದವರ ಮುಂದೆ ವಿಚಾರಣೆ ನಡೆಯಿತು. ತಾನು 9ನೇ ತರಗತಿವರೆಗೆ ಓದಿದ್ದು, ವಿದ್ಯಾಭ್ಯಾಸ ಬಿಟ್ಟು ಸುಮ್ಮನಿರುವುದಾಗಿ ಆತ ವಿವರಿಸಿದ.

ತಾನು 20 ರಿಂದ 30 ರೂಪಾಯಿ ಮಾತ್ರ ತೆಗೆದಿದ್ದು, ಮೊಬೈಲ್ ಸಿಮ್‍ಗೆ ಕರೆನ್ಸಿಗಾಗಿ ಈ ಕೃತ್ಯ ಮಾಡಿರುವುದಾಗಿ ಹೇಳಿದ. ಪ್ಯಾಂಟಿನ ಎದುರು ಜೇಬಿನಲ್ಲಿ ದೊಡ್ಡದೊಂದು ಮೊಬೈಲ್ ಇತ್ತು. ಅದನ್ನು ಪಡೆದುಕೊಂಡು ಪರೀಕ್ಷಿಸಿದೆವು. ಈ ಹುಡುಗನಿಗೆ ಫೇಸ್ ಬುಕ್‍ನಲ್ಲಿ 750 ಸ್ನೇಹಿತರು! ವ್ಯಾಟ್ಸ್‍ಅಪ್‍ನಲ್ಲಿ ಇನ್ನಿಲ್ಲದಷ್ಟು ಮಂದಿ ಪರಿಚಿತರು. ಹುಡುಗ-ಹುಡುಗಿಯರಿಗೆಲ್ಲಾ ಗುಡ್ ಮಾರ್ನಿಂಗ್, ಗುಡ್‍ನೈಟ್, ಲೈಕ್ ಯು... ಹೀಗೆ ಆ ವಯಸ್ಸಿಗೆ ತಕ್ಕುದಾದ ಮೆಸೇಜ್‍ಗಳೇ ಹೊರತು ಅಶ್ಲೀಲವಾದ ಚಿತ್ರಗಳಾವುವೂ ಇರಲಿಲ್ಲ.

ಹುಡುಗನಿಗೆ ವಿದ್ಯಾರ್ಹತೆಯೂ ಇಲ್ಲ; ಕೆಲಸವೂ ಇಲ್ಲ. ಜೊತೆಗೆ ಆತನ ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ; ತಂದೆ ಬೆಳಿಗ್ಗೆ ಕೆಲಸಕ್ಕೆ ತೆರಳಿದರೆ ವಾಪಾಸ್ಸಾಗುವುದು ಯಾವುದೋ ಸಮಯದಲ್ಲಿ. ಮಗ ಮಾಡುವುದಾದರೂ ಏನು?

ಮೊಬೈಲ್‍ಗೆ ದಾಸನಾಗಿಬಿಟ್ಟಿದ್ದ; ನೆಟ್ಟಗಿದ್ದ ಕುತ್ತಿಗೆ ಡೊಂಕಾಗಿ ಹೋಗಿದೆ! ಬಹುಶಃ ಪೋಷಕರ ಪ್ರೀತಿ, ಭಯ, ಆಶ್ರಯ ಎಲ್ಲದರಿಂದಲೂ ವಂಚಿತನಾಗಿರಬಹುದು ಎನ್ನಿಸಿತು. ತಪ್ಪೊಪ್ಪಿಗೆ ಬರೆದುಕೊಡುವಂತೆ ಕೇಳಿದರೆ ಬರಹವೂ ಗೊತ್ತಿಲ್ಲ...

ನಾವೇ ಬರೆದು ಸಹಿ ಮಾಡಿಸಿ ಬಂದವರ ಸಾಕ್ಷಿ ಸಹಿ ಪಡೆದವು.

ಮುಂದೇನು?

ಬಂದಿದ್ದವರು ಆತಂಕದ ಮಾತುಗಳನ್ನಾಡಿದರು.

ಆ ಹುಡುಗನ ಮುಖ ನೋಡಿದಾಗ ಎಲ್ಲೋ ಒಂದೆಡೆ ಮುಗ್ಧತೆ ಕಂಡು ಬಂದಿತು.

ನನ್ನ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರು, ನಿನ್ನನ್ನು ಕೆಲಸದಲ್ಲಿ ತೊಡಗಿಸಿಕೊಂಡರೆ ಇಂತಹ ಆಲೋಚನೆಗಳು ಬರುವುದಿಲ್ಲ ಎಂದೆ. ಹುಡುಗ ಒಪ್ಪಿದ. ಕರೆತಂದವರು ಆಶ್ಚರ್ಯಪಟ್ಟರು. ಸ್ವಲ್ಪ ದಿನ ಮೊಬೈಲ್ ಕೊಡುವುದಿಲ್ಲ ಎಂದೆ.

ಮಾರನೇ ದಿನದಿಂದ ನನ್ನಲ್ಲಿ ಕೆಲಸ; ಊಟ ವಸತಿ ಸೌಕರ್ಯಕ್ಕೆ ಹುಡುಗ ಒಗ್ಗಿದ.ಆತನ ಮನೆಯಿಂದ ಅವನ ಅವಶ್ಯ ವಸ್ತುಗಳು ಬಂದವು. ನನ್ನ ಮನೆಯ ಸದಸ್ಯನಂತೆ ಬದಲಾದ. ತಂದೆ-ತಾಯಿಗೆ ಫೋನ್ ಮಾಡಲು ಕಚೇರಿ ದೂರವಾಣಿ ಬಳಸು ಎಂದೆ.

ಮೂರು ದಿನಗಳಾದವು... ಹಣೆಯಲ್ಲಿ ಕುಂಕುಮವಿಟ್ಟು ಕೆಲಸಕ್ಕೆ ಬಂದಿದ್ದ- ‘ದೇವರ ಮೇಲೆ ನಂಬಿಕೆ ಇದೆಯಾ’ ಎಂದೆ. ಹೌದು ಎನ್ನುತ್ತಾ ನನ್ನ ತಿಂಡಿ ಬಗ್ಗೆ ವಿಚಾರಿಸಿದ.

ಮೊಬೈಲ್ ನನ್ನಲ್ಲಿದೆ, ಬೇಕಾ ನಿನಗೆ? ಎಂದೆ.

ಬೇಡ ಸಾರ್, ನಾನೀಗ ಖುಷಿಯಲ್ಲಿದ್ದೇನೆ; ಯಾವುದೇ ಯೋಚನೆಗಳಿಲ್ಲ; ನಿಮ್ಮಲ್ಲೇ ಇರಲಿ; ಅವಶ್ಯವಿದ್ದಾಗ ತಂದೆ-ತಾಯಿಗೆ ಕಚೇರಿಯಿಂದಲೇ ದೂರವಾಣಿಯಲ್ಲಿ ಮಾತಾಡುತ್ತೇನೆ ಎಂದ.

ಇದೆಂತಹಾ ಪರಿವರ್ತನೆ ಅನ್ನಿಸಿತು

ಜೊತೆಯಲ್ಲಿ ಕೆಲಸ ಮಾಡುವವರಿಗೆ ಇವನು ಕುತ್ತಿಗೆ ನೆಟ್ಟನೆ ಮಾಡಿ ಓಡಾಡುವಂತೆ ನೋಡಿಕೊಳ್ಳಿ ಎಂದೆ.

15 ದಿನಗಳಾಗಿವೆ. ಈಗ. ಹುಡುಗನಲ್ಲಿ ಸದಾ ನಗು, ಸದಾ ಗೆಲವು. ಬರುವ ಗ್ರಾಹಕರೊಂದಿಗೆ ಪ್ರೀತಿಯ ಮಾತು; ಎಲ್ಲರೊಂದಿಗೂ ಒಂದಾಗಿ ಬೆರೆಯುವ ತವಕ...

ಶುದ್ಧ ಮಾತು - ಶುದ್ಧ ಮನಸ್ಸು -ಶುದ್ಧ ಹಸ್ತ

ದೂರವಾಣಿ ಮೂಲಕ ಮಾತಾಡಿದ ಅವನ ತಂದೆ ಕೃತಜ್ಞತೆಯ ಭಾವವನ್ನು ವ್ಯಕ್ತಪಡಿಸಿದರು. ಅಂದು ಅವನ ವಿರುದ್ಧ ಪೊಲೀಸ್ ಪುಕಾರು ಕೊಟ್ಟು ಜೈಲಿಗಟ್ಟಿದ್ದರೆ; ತಾನೂ ಕೂಡ ಬದುಕುತ್ತಿರಲಿಲ್ಲ ಎಂದು ಭಾವುಕತೆಯ ನುಡಿಗಳನ್ನಾಡಿದರು. ಮಗ ಖುಷಿಯಲ್ಲಿರುವ ಬಗ್ಗೆ ಮೆಚ್ಚುಗೆಯ ಮಾತುಗಳು ಬಂದವು.

ಹೊಸ ವರ್ಷದ ದಿನ ಈ ಬರಹದ ಅಗತ್ಯವೇನು ಅಂತ ಅನ್ನಿಸಿರಬಹುದಲ್ಲವೇ ಸಹಜವಾಗಿ ನಿಮಗೆ...

ಈ ಘಟನೆಯಲ್ಲಿ ನಾನು ಕಂಡುಕೊಂಡ ಹಲವು ಸತ್ಯಗಳನ್ನು ಹೊಸ ದಿನದಂದು ಹಂಚಿಕೊಳ್ಳಬೇಕೆನ್ನಿಸಿತು.

ಒಂದು: ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯ ಅಗತ್ಯ; ವಾತ್ಸಲ್ಯದ ಅವಶ್ಯಕತೆ; ಅವರ ನಡೆ-ನುಡಿಗಳ ಬಗ್ಗೆ ಕಾಳಜಿ ಮತ್ತು ಕರ್ತವ್ಯ ಪ್ರಜ್ಞೆ, ಅವುಗಳಿಂದ ವಂಚಿತರಾದ ಮಕ್ಕಳು ತಪ್ಪು ದಾರಿ ಹಿಡಿದರೆ ಅದರ ಪಾಪ ಪ್ರಜ್ಞೆ ಪೋಷಕರನ್ನು ಕಾಡಬೇಕು.

ಎರಡು: ಮಕ್ಕಳು ಸಣ್ಣಪುಟ್ಟ ತಪ್ಪು ಮಾಡಿದಾಗ ಮನೆ ಮತ್ತು ಸಮಾಜ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸುವ ಬದಲು, ಸಾಂತ್ವನದ-ವಿಶ್ವಾಸದ-ಜವಾಬ್ದಾರಿಯ ಮತ್ತು ಪರಿಣಾಮದ ಮಾತು ಮತ್ತು ಹೆಜ್ಜೆಗಳಿಂದ ಅವರುಗಳ ಮನಸ್ಸನ್ನು ಪರಿವರ್ತಿಸಲು ಸಾಧ್ಯವಿದೆ ಎನ್ನುವುದು.

ಮೂರು: ಓದುವ ವಯಸ್ಸಿನ ಮಕ್ಕಳಿಗೆ ಮೊಬೈಲ್‍ನಂತಹ ವಸ್ತುಗಳನ್ನು ಕೊಟ್ಟು ನಾವು ಅವರುಗಳಿಂದ ದೂರವಿದ್ದರೆ ಆಗುವ ದುಷ್ಪರಿಣಾಮದ ಅರಿವು, ಮಾನಸಿಕವಾಗಿ, ದೈಹಿಕವಾಗಿ ಕೃಷರಾಗುವ ನಮ್ಮ ಮಕ್ಕಳು ಮನೆಗೆ ಮಾತ್ರವಲ್ಲ ಸಮಾಜಕ್ಕೂ ಹೊರೆಯಾಗಿ ನಮ್ಮ ನೋವಿಗೆ ಕಾರಣರಾದರೆ; ಅದಕ್ಕೆ ನಾವೇ ಹೊಣೆ ಎಂಬ ಅಳುಕು ನಮ್ಮದಾಗಿರಬೇಕು.

ಓದುವ ವಿದ್ಯಾರ್ಥಿಗಳ ಪೋಷಕರು ಇಂತಹ ವಿಷಯಗಳಲ್ಲಿ ಜಾಗರೂಕರಾಗಿ ಎನ್ನುವದು ನನ್ನ ಆಂತರ್ಯದ ಮಾತು.

ಜಿಲ್ಲೆಯ ಸಹೃದಯರಿಗೆಲ್ಲ 2020 ಸಂತಸಮಯವಾಗಿರಲಿ.

ಜಿ. ಚಿದ್ವಿಲಾಸ್

ಸಂಪಾದಕ