ಮಡಿಕೇರಿ, ಡಿ. 30 : ಅರಣ್ಯ ಇಲಾಖೆÉಯು ಇಂದು ಕರೆದಿದ್ದ ಸಾರ್ವಜನಿಕ ಸಭೆಯಲ್ಲಿ ಯಾರೂ ಪಾಲ್ಗೊಳ್ಳದಿದ್ದರಿಂದ ಸಭೆಯನ್ನು ರದ್ದು ಮಾಡಲಾಯಿತಲ್ಲದೆ ಸಾರ್ವಜನಿಕರು ಅಭ್ಯತ್‍ಮಂಗಲ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮರಗಳನ್ನು ಪುನರ್ವಸತಿ ಕಲ್ಪಿಸಲು ಕಡಿಯುವದರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಲು ಒಂದು ವಾರದ ಸಮಯಾವಕಾಶ ನೀಡಲಾಗಿದೆ.

ಸೋಮವಾರಪೇಟೆಯ ಅಭ್ಯತ್‍ಮಂಗಲ ಗ್ರಾಮದಲ್ಲಿ ಈ ವರ್ಷದ ಅತಿವೃಷ್ಟಿಯಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು 87/2 ಸರ್ವೆ ನಂಬರ್‍ನ ಜಾಗ ಗುರುತಿಸಲ್ಪಟ್ಟಿದ್ದು, ಈ ಜಾಗದಲ್ಲಿ ಪುನರ್ವಸತಿ ಕಲ್ಪಿಸಲು 300ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಅವಶ್ಯಕತೆ ಇದೆ. ಆದರೆ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ (ಕೆಪಿಟಿ ಆಕ್ಟ್ ಸೆಕ್ಷನ್-8(vii) ನಿಯಮ ದಡಿ 50ಕ್ಕೂ ಹೆಚ್ಚಿನ ಮರಗಳನ್ನು ಯಾವುದೇ ಸಾರ್ವಜನಿಕ ಉದ್ದೇಶಕ್ಕೆ ತೆರವುಗೊಳಿಸಲು ಸಾರ್ವಜನಿಕರಿಂದ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ. ಈ ಹಿನ್ನೆಲೆ ಅರಣ್ಯ ಇಲಾಖೆಯು ತಾ. 30ರಂದು ಸಾರ್ವಜನಿಕ ಸಭೆ ಕರೆದಿತ್ತಾದರೂ, ಸಾರ್ವಜನಿಕರಾಗಲಿ ಅಥವಾ ಪರಿಸರ ವಾದಿಗಳಾಗಲಿ ಮರ ಕಡಿಯುವುದಕ್ಕೆ ತಮ್ಮ ಆಕ್ಷೇಪವನ್ನು ಅರಣ್ಯ ಇಲಾಖೆಗೆ ಸಲ್ಲಿಸಲಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಈ ಆಕ್ಷೇಪಣೆ ಸಲ್ಲಿಸಲು ಇನ್ನೂ ಒಂದು ವಾರ ಸಮಯಾವಕಾಶವಿದೆ ಎಂದು ತಿಳಿಸಿ ‘ಈ ಮರಗಳನ್ನು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಕಡಿಯುತ್ತಿರುವುದ ರಿಂದ ಇಲ್ಲಿ ಯಾವುದೇ ಆಕ್ಷೇಪಗಳು ಈವರೆಗೆ ಸುಳಿದು ಬಂದಿಲ್ಲ. ಆದರೂ, ಸಾರ್ವಜನಿಕರು ಇನ್ನೂ ಒಂದು ವಾರದೊಳಗೆ ಆಕ್ಷೇಪವಿದ್ದಲ್ಲಿ ಅದನ್ನು ಲಿಖಿತ ರೂಪಿನಲ್ಲಿ ಕಚೇರಿಗೆ ಸಲ್ಲಿಸಬಹುದು,’ ಎಂದು ತಿಳಿಸಿದ್ದಾರೆ. ಸುಮಾರು 7.66 ಎಕರೆ ಜಾಗದಲ್ಲಿ ಒಟ್ಟು 339 ಮರಗಳನ್ನು ಕಡಿಯುವ ಅವಶ್ಯಕತೆ ಇದ್ದು, ಇದರಲ್ಲಿ ವಿವಿಧ ಜಾತಿಯ ಒಟ್ಟು 192 ಹಸಿ ನಿಂತ ಮರಗಳಿಂದ ಅಂದಾಜು 139.77 ಘ.ಮೀ. ಇರುವುದಾಗಿ ಹಾಗೂ ಸೌದೆಗೆ ಯೋಗ್ಯವಾದ ವಿವಿಧ ಜಾತಿಯ ಒಟ್ಟು 147 ಮರಗಳಿಂದ ಅಂದಾಜು 80.600 ಘ.ಮೀ. ಸೌದೆ ದೊರೆಯ ಬಹುದಾಗಿ ವರದಿ ನೀಡಿದ್ದಾರೆ.