ಶನಿವಾರಸಂತೆ, ಡಿ. 30: ಶನಿವಾರಸಂತೆ ಮುಖ್ಯರಸ್ತೆ ಸಮೀಪವಿರುವ ಭಾರತ್ ಪೆಟ್ರೋಲ್ ಬಂಕ್‍ನಿಂದ ಬಂದ ನೀರನ್ನು ರಸ್ತೆಯ ಮೇಲೆ ಬಿಡದೆ ನೇರವಾಗಿ ಚರಂಡಿಗೆ ಹರಿಸುವಂತೆ ಲೋಕೋಪಯೋಗಿ ಇಲಾಖೆ ನೋಟೀಸ್ ಜಾರಿ ಮಾಡಿರುತ್ತದೆ.

ಶನಿವಾರಸಂತೆ ಗ್ರಾಮದ ಒಳಗಡೆ ಹಿರಿಸಾವೆ - ಚೆಟ್ಟಳ್ಳಿ ರಾಜ್ಯ ಹೆದ್ದಾರಿ ಹಾದು ಹೋಗಿದ್ದು; ರಸ್ತೆಯ ಬದಿಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಇದೆ. ಬಂಕ್‍ನಲ್ಲಿ ವಾಹನ ಹಾಗೂ ಇತರೇ ವಸ್ತುಗಳನ್ನು ತೊಳೆದ ನೀರು ನೇರವಾಗಿ ರಸ್ತೆಗೆ ಬಿಡುತ್ತಿದ್ದು; ರಸ್ತೆಯ ಮೇಲೆ ನೀರು ನಿಂತು ರಸ್ತೆ ಹಾಳಾಗಿ, ಗುಂಡಿ ಬೀಳುತ್ತಿದೆ. ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಶನಿವಾರಸಂತೆಯ ರಸ್ತೆಗೆ ಭೂಮಿ ಪೂಜೆಗೆ ಆಗಮಿಸಿದಾಗ ಸ್ಥಳೀಯ ಸಾರ್ವಜನಿಕರು ಈ ಬಗ್ಗೆ ದೂರು ನೀಡಿದಾಗ ಶಾಸಕರು ಕೂಡಲೇ ಸಂಬಂಧಪಟ್ಟ ಇಲಾಖೆಗೆ , ಬಂಕ್‍ಗೆ ನೋಟೀಸ್ ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಹೊಸ ರಸ್ತೆ ಕಾಮಗಾರಿ ಕೆಲಸ ಪ್ರಗತಿಯಲ್ಲಿರುವುದರಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಉಪವಿಭಾಗ ಸೋಮವಾರಪೇಟೆ ವತಿಯಿಂದ ಭಾರತ್ ಪೆಟ್ರೋಲ್ ಬಂಕ್‍ಗೆ ನೋಟೀಸ್ ಜಾರಿ ಮಾಡಲಾಗಿದೆ.