ಗೋಣಿಕೊಪ್ಪಲು, ಡಿ. 30: ಶಿಕ್ಷಣದಿಂದ ವಂಚಿತಗೊಂಡಲ್ಲಿ ಜೀವನದಲ್ಲಿ ಮುಂದೆ ದೊಡ್ಡ ಅಪಾಯ ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದರಿಂದ ಸಿಕ್ಕಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜನೆಗೊಂಡಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆಯ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದ ಇವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಇಲಾಖೆ ವತಿಯಿಂದ ಅನೇಕ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರ ಪ್ರಯೋಜನ ಪಡೆದು ಉತ್ತಮ ಶಿಕ್ಷಣ ಪಡೆಯಬೇಕು. ಕನ್ನಡ ಮಾಧ್ಯಮದಲ್ಲಿ ಸಾಕಷ್ಟು ಪ್ರತಿಭಾವಂತರು ಹೆಸರು ಮಾಡಿದ್ದಾರೆ. ಆ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿ ಗಳು ಉತ್ತಮ ಪ್ರತಿಭಾವಂತರಾಗಬೇಕು. ಪರೀಕ್ಷೆ ಸಮಯದಲ್ಲಿ ಪೋಷಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದರು. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವುದೇ ವಿದ್ಯಾರ್ಥಿಗಳು ನನ್ನನ್ನು ನೇರವಾಗಿ ಸಂಪರ್ಕಿಸಿ ಸಹಕಾರ ಪಡೆಯಬಹು ದೆಂದರು. ಗ್ರಾಮ ಪಂಚಾಯಿತಿಯ ಸದಸ್ಯೆ ರತಿ ಅಚ್ಚಪ್ಪ ಮಾತನಾಡಿ ತಮ್ಮ ಮಕ್ಕಳ ಬಗ್ಗೆ ಪೋಷಕರಿಗೆ ವಿಶೇಷ ಗಮನವಿರ ಬೇಕು ಮನೆಯಿಂದ ಹೊರಟ ವಿದ್ಯಾರ್ಥಿ ಶಾಲೆಗೆ ಸರಿಯಾದ ಸಮಯದಲ್ಲಿ ತಲುಪಿರಬಹುದೇ ಎಂದು ವಿಚಾರಿಸಬೇಕು. ಎಲ್ಲವನ್ನು ಶಿಕ್ಷಕರ ಮೇಲೆ ಒತ್ತಡ ಹೇರಿದರೆ ಸಾಲದು ಮನೆಯಲ್ಲಿ ಮಕ್ಕಳೊಂದಿಗೆ ಕಲಿಕೆಯಲ್ಲಿ ಪೋಷಕರು ಸಹಕರಿಸಬೇಕೆಂದರು. ಸಭೆಯಲ್ಲಿ ಎಸ್‍ಡಿಎಂಸಿ ಅಧ್ಯಕ್ಷರಾದ ಜಮೀಲಾ,ಸದಸ್ಯರಾದ ಮಣಿ, ಚೋಂದಮ್ಮ, ಶಿಕ್ಷಕರಾದ ಕಾವೇರಮ್ಮ,ಅರುಣ ಆ್ಯನ್ಸಿ ಡಿಸೋಜ, ಎಂ. ಎಸ್. ವಿದ್ಯಾ, ರೇವತಿ, ಜಿ.ಆರ್. ಸುಮಿ, ನೂತನ್‍ಕುಮಾರ್ ಹೆಚ್.ಡಿ. ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.